Advertisement

ಮಂಗಳೂರಿನಲ್ಲಿ ಮತ್ತೆರಡು ಪ್ರಕರಣ : ಉಡುಪಿ ಮೂಲದ ತಾಯಿ-ಮಗನಿಗೆ ಸೋಂಕು ದೃಢ

08:44 AM May 14, 2020 | Hari Prasad |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಉಡುಪಿ ಮೂಲದ ಇಬ್ಬರಿಗೆ ಕೋವಿಡ್ ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಪ್ರಕರಣ ಏರಿಕೆಯಾಗುತ್ತಲೇ ಇರುವುದು ಆತಂಕ ಇನ್ನಷ್ಟು ಹೆಚ್ಚಾಗಲು ಕಾರಣವಾಗಿದೆ.

Advertisement

ಕಾರ್ಕಳ ತಾಲೂಕಿನ ಸಾಣೂರು ನಿವಾಸಿಗಳಾದ 50 ವರ್ಷದ ಮಹಿಳೆ ಅವರ 26 ವರ್ಷದ ಪುತ್ರನಲ್ಲಿ ಕೋವಿಡ್ ದೃಢಪಟ್ಟಿದೆ. ಈ ಮಹಿಳೆ ಕಳೆದ ವಾರ ಕೋವಿಡ್ ದೃಢಪಟ್ಟ ಶಕ್ತಿನಗರ ಕುಲಶೇಖರದ 80 ವರ್ಷದ ವೃದ್ಧೆ ಚಿಕಿತ್ಸೆ ಪಡೆಯುತ್ತಿದ್ದ ವಾರ್ಡ್‌ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ವೃದ್ಧೆಯ ಸಂಪರ್ಕದಿಂದ ಇವರಿಗೆ ಸೋಂಕು ತಗಲಿದೆ.

ಸಾಣೂರಿನ ಮಹಿಳೆಯನ್ನು ಎ. 20ರಂದು ಪಡೀಲಿನ ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ಅನಾರೋಗ್ಯದ ಕಾರಣದಿಂದ ದಾಖಲಿಸಲಾಗಿತ್ತು. ತಾಯಿಯನ್ನು ನೋಡಿಕೊಳ್ಳಲು ಪುತ್ರನೂ ಜತೆಗಿದ್ದರು. ಫಸ್ಟ್‌ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ ಕೋವಿಡ್ ಹೆಚ್ಚುತ್ತಿದೆ ಎಂಬ ನೆಲೆಯಲ್ಲಿ ಆಸ್ಪತ್ರೆ ಯನ್ನು ಸೀಲ್‌ಡೌನ್‌ ಮಾಡಿ ಅಲ್ಲಿದ್ದ ಎಲ್ಲರನ್ನೂ ಅಲ್ಲಿಯೇ ಕ್ವಾರಂಟೈನ್‌ ಮಾಡಲಾಗಿತ್ತು. ಈ ತಾಯಿ-ಮಗನೂ ಇದ್ದರು. ಅವರ ಮೊದಲ ಗಂಟಲ ದ್ರವ
ಮಾದರಿ ಪರೀಕ್ಷೆಯಲ್ಲಿ ನೆಗೆಟಿವ್‌ ಬಂದಿದ್ದು, 12 ದಿನಗಳ ಬಳಿಕ ಪರೀಕ್ಷಿಸಿದ ದ್ವಿತೀಯ ಹಂತದ ವರದಿಯಲ್ಲಿ ಇಬ್ಬರಿಗೂ ಪಾಸಿಟಿವ್‌ ಬಂದಿದೆ.

67 ನೆಗೆಟಿವ್‌
ಮಂಗಳವಾರ ಸ್ವೀಕೃತವಾದ 69 ಮಂದಿಯ ಗಂಟಲ ದ್ರವ ಮಾದರಿ ಪರೀಕ್ಷಾ ವರದಿ ಪೈಕಿ 67 ನೆಗೆಟಿವ್‌, 2 ಪಾಸಿಟಿವ್‌ ಆಗಿದೆ. 55 ಮಂದಿಯ ಮಾದರಿಯನ್ನು ಕಳುಹಿಸಿ ಕೊಡಲಾಗಿದ್ದು, ಒಟ್ಟು 114 ಮಂದಿಯ ವರದಿ ಬರಲು ಬಾಕಿ ಇದೆ. 113 ಮಂದಿ ತೀವ್ರ ಉಸಿರಾಟದ ಸಮಸ್ಯೆಯಿಂದ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. 130 ಮಂದಿಯನ್ನು ಹೊಸದಾಗಿ ತಪಾಸಣೆಗೊಳಪಡಿಸಲಾಗಿದೆ. 20 ಮಂದಿ ಸುರತ್ಕಲ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಇಎಸ್‌ಐ ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ 24 ಮಂದಿಯನ್ನು ಹೋಂ ಕ್ವಾರಂಟೈನ್‌ಗೆ ಕಳುಹಿಸಿಕೊಡಲಾಗಿದೆ.

ಬೋಳೂರಿನ ಮಹಿಳೆ ಗಂಭೀರ
ಕೊರೊನಾ ದೃಢಪಟ್ಟಿರುವ ಬೋಳೂರಿನ 58 ವರ್ಷದ ಮೆದುಳಿನ ಸೋಂಕಿನಿಂದ ಬಳಲುತ್ತಿದ್ದು, ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಕುಲಶೇಖರದ 80 ವರ್ಷದ ವೃದ್ಧೆ ಅಧಿಕ ರಕ್ತದೊತ್ತಡ ಮತ್ತು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದಾರೆ. ಉಳಿದಂತೆ 12 ಮಂದಿ ಕೋವಿಡ್ ರೋಗಿಗಳ ಆರೋಗ್ಯ ಸ್ಥಿತಿ ತೃಪ್ತಿಕರವಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next