ಮಂದ್ ಸೌರ್(ಮಧ್ಯಪ್ರದೇಶ): ಮಂದ್ ಸೌರ್ ನಲ್ಲಿ 8 ವರ್ಷದ ಬಾಲಕಿ ಮೇಲೆ ಪೈಶಾಚಿಕವಾಗಿ ಅತ್ಯಾಚಾರ ಎಸಗಿದ್ದ ಇಬ್ಬರಿಗೆ ವಿಶೇಷ ನ್ಯಾಯಾಲಯ ಮಂಗಳವಾರ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಹೊಸದಾಗಿ ಸೇರಿಸಲ್ಪಟ್ಟ ಐಪಿಸಿ ಸೆಕ್ಷನ್ 376ಡಿಬಿ( ಒಬ್ಬ ಅಥವಾ ಅದಕ್ಕಿಂತ ಹೆಚ್ಚಿನ ಜನರು 12ವರ್ಷದೊಳಗಿನ ಬಾಲಕಿಯರ ಮೇಲೆ ನಡೆಸುವ ಅತ್ಯಾಚಾರಕ್ಕೆ ವಿಧಿಸುವ ಶಿಕ್ಷೆ) ಅನ್ವಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ನಿಶಾ ಗುಪ್ತ್ ಅವರು, ಆರೋಪಿ ಇರ್ಫಾನ್ ಅಲಿಯಾಸ್ ಭಾಯು(20ವರ್ಷ) ಹಾಗು ಅಸೀಫ್ ದೋಷಿ ಎಂದು ಘೋಷಿಸಿ, ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿರುವುದಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿಎಸ್ ಥಾಕೂರ್ ತಿಳಿಸಿದ್ದಾರೆ.
ಜೂನ್ 26ರಂದು ಮಂದ್ ಸೌರ್ ನಲ್ಲಿ ಶಾಲೆಯ ಹೊರಭಾಗದಲ್ಲಿ ತಂದೆಯ ಬರುವಿಕೆಗಾಗಿ ಕಾಯುತ್ತಿದ್ದ ವೇಳೆ ಆರೋಪಿಗಳು ಬಾಲಕಿಯನ್ನು ಅಪಹರಿಸಿಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಳಿಕ ಆಕೆಯ ಗಂಟಲು ಸೀಳಿ ಆಕೆ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ ಬಾಲಕಿಯ ದೇಹವನ್ನು ನಿರ್ಜನ ಸ್ಥಳದಲ್ಲಿ ಎಸೆದಿದ್ದರು.
ಆದರೆ ಬಾಲಕಿ ಬದುಕುಳಿದಿದ್ದು ಇಂದೋರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಾಲಕಿಯ ಮೈಮೇಲೆ ಹಲವಾರು ಗಾಯಗಳಾಗಿದ್ದು, ಮೂಗಿಗೆ ಬಲವಾದ ಏಟು ಬಿದ್ದಿದೆ. ಆಕೆಯ ಗುಪ್ತಾಂಗಕ್ಕೆ ವಸ್ತುವಿನಿಂದ ಗಾಯಗೊಳಿಸಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಈ ಘಟನೆ ಮಂದ್ ಸೌರ್ ನಲ್ಲಿ ಭಾರೀ ಪ್ರತಿಭಟನೆಗೆ ಕಾರಣವಾಯಿತು. ಬೀದಿಯಲ್ಲಿ ಮೆರವಣಿಗೆ ನಡೆಸಿ ಶಾಲೆ, ಕಾಲೇಜು, ಮಾರುಕಟ್ಟೆಯನ್ನು ಬಂದ್ ಮಾಡಿ ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡುವಂತೆ ಪ್ರತಿಭಟನಾಕಾರರು ಬೇಡಿಕೆ ಇಟ್ಟಿದ್ದರು.
ಕೋರ್ಟ್ ನೀಡಿರುವ ತೀರ್ಪಿಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಅತ್ಯಾಚಾರಿಗಳು ಭೂಮಿಗೆ ಭಾರ ಮತ್ತು ಅವರು ಜೀವಿಸಲು ಅನರ್ಹರು ಎಂದು ತಿಳಿಸಿದ್ದಾರೆ.