Advertisement

ರಾಜ್ಯ ಇನ್ನು ಎರಡು ಲಕ್ಷ ಕೋಟಿ ರೂ. ಸಾಲಗಾರ

03:45 AM Mar 07, 2017 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರಾವಧಿ ಮುಗಿಯುವುದರೊಳಗೆ ಎರಡು ಲಕ್ಷ ಕೋಟಿ ರೂ. ಮೊತ್ತದ ಬಜೆಟ್‌ ಮಂಡಿಸುತ್ತಾರೋ ಇಲ್ಲವೋ ಆದರೆ, ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ ರಾಜ್ಯದ ಮೇಲಿನ ಸಾಲದ ಪ್ರಮಾಣ ಎರಡು ಲಕ್ಷ ಕೋಟಿ ರೂ. ದಾಟಲಿದೆ.

Advertisement

ರಾಜ್ಯ ಸರ್ಕಾರವು 2016-17 ನೇ ಸಾಲಿಗೆ 31036 ಕೋಟಿ ರೂ. ಸಾಲ ಪಡೆಯಲು ಅವಕಾಶ ಮಾಡಿಕೊಂಡಿದ್ದು, 2016 ಡಿಸೆಂಬರ್‌ ಅಂತ್ಯಕ್ಕೆ 12668.67 ಕೋಟಿ ರೂ. ಸಾಲ ಪಡೆದಿದೆ. ಮಾರ್ಚ್‌ ಅಂತ್ಯದ ವೇಳೆಗೆ ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ರಾಜ್ಯದ ಸಾಲ ಎರಡು ಲಕ್ಷ ಕೋಟಿ ರೂ.ಗೆ ಏರುವ ಸಾಧ್ಯತೆಯಿದೆ.

2015-16 ನೇ ಸಾಲಿನ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲದ ಪ್ರಮಾಣ 1,83,203 ಕೋಟಿ ರೂ.ಗಳಿದ್ದು 2016-17 ನೇ ಸಾಲಿನ ಸಾಲವೂ ಸೇರಿದರೆ ಎರಡು ಲಕ್ಷ ಕೋಟಿ ರೂ.ವರೆಗೆ ತಲುಪಲಿದೆ. ರಾಜ್ಯ ಸರ್ಕಾರ ಆರ್ಥಿಕ ಶಿಸ್ತಿನ ಮಿತಿಯೊಳಗಿದ್ದೇವೆ ಎಂದು ಹೇಳುತ್ತಲೇ ಪ್ರತಿವರ್ಷ ಸಾಲದ ಪ್ರಮಾಣ ಹೆಚ್ಚಿಸಿಕೊಳ್ಳುತ್ತಲೇ ಇದೆ.

ಮತ್ತೂಂದು ಆತಂಕಕಾರಿ ವಿಚಾರ ಎಂದರೆ, ನೋಟು ಅಮಾನ್ಯ ಪರಿಣಾಮ ಪ್ರಸಕ್ತ ವರ್ಷ ರಾಜ್ಯ ಸರ್ಕಾರಕ್ಕೆ 4 ಸಾವಿರ
ಕೋಟಿ ರೂ.ಗಳಷ್ಟು ಆದಾಯ ಖೋತಾ ಆಗುವ ನಿರೀಕ್ಷೆಯಿದ್ದು, ಬರ ಹಿನ್ನೆಲೆಯಲ್ಲಿ 50 ಲಕ್ಷ ಮೆಟ್ರಿಕ್‌ ಟನ್‌ ಆಹಾರ ಉತ್ಪಾದನೆಯೂ ಕಡಿಮೆಯಾಗಿ ಇತರೆ ವಲಯಗಳ ಪ್ರಗತಿಯೂ ಸ್ವಲ್ಪ ಮಟ್ಟಿಗೆ ಕುಂಠಿತಗೊಂಡಿರುವುದರಿಂದ ಶೇ.6.2 ನಿರೀಕ್ಷಿತ ಜಿಎಸ್‌ಡಿಪಿ ಬೆಳವಣಿಗೆ ಅನುಮಾನವಾಗಿದೆ. ಇದು ಮುಂದಿನ ವರ್ಷದ ಆರ್ಥಿಕತೆ ಮೇಲೂ ಪರಿಣಾಮ ಬೀರಲಿದೆ.

ಹೀಗಾಗಿ, ಈಗಿನ ರಾಜ್ಯದ ಆರ್ಥಿಕ ಸ್ಥಿತಿಗತಿ ಪ್ರಕಾರ ಅಧಿಕಾರವಧಿಯ ಕೊನೆಯ ವರ್ಷ 2018-19 ನೇ ಸಾಲಿನಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ 2 ಲಕ್ಷ ಕೋಟಿ ರೂ. ಬಜೆಟ್‌ ಮಂಡಿಸುವುದು ಕಷ್ಟ ಎಂದು ಹಣಕಾಸು ಇಲಾಖೆ
ಮೂಲಗಳು ತಿಳಿಸುತ್ತವೆ.

Advertisement

2015-16 ರಲ್ಲಿ 21072.34 ಕೋಟಿ ರೂ. ಸಾಲ ಪಡೆಯಲಾಗಿದ್ದು, ಜಿಎಸ್‌ಡಿಪಿಯ ಶೇ.24.91 ರಷ್ಟಾಗಿತ್ತು. ಜಿಎಸ್‌ಡಿಪಿ ಅನುಪಾತ ಶೇ.25 ಮಿತಿಯೊಳಗೇ ಸರ್ಕಾರ ಇದೆ. ಜತೆಗೆ ಕರ್ನಾಟಕ ಆರ್ಥಿಕ ಹೊಣೆಗಾರಿಕೆ ಅಧಿನಿಯಮದ ಪ್ರಕಾರ ವಿತ್ತೀಯ ಕೊರತೆಯು ಜಿಎಸ್‌ಡಿಪಿಯ ಶೇ.3 ರ ಮಿತಿಯೊಳಗಿರಬೇಕು ಅದನ್ನು ಕಾಯ್ದಕೊಂಡಿದೆ ಎಂದು ಸಮರ್ಥನೆ ಸಹ ನೀಡಲಾಗಿತ್ತು.

2016-17 ನೇ ಸಾಲಿನಲ್ಲಿ ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ವರದಿಯಲ್ಲೂ ಒಟ್ಟಾರೆ ಸಾಲದ ಪ್ರಮಾಣ 2,08,557 ಕೋಟಿ ರೂ. ಅಂಕಿ ಮುಟ್ಟಬಹುದು ಎಂದು ನಿರೀಕ್ಷಿಸಲಾಗಿದೆ. ಈ ಮಧ್ಯೆ, ಸರ್ಕಾರ 2016-17 ನೇ ಸಾಲಿನಲ್ಲಿ ಸ್ವಂತ ತೆರಿಗೆ ಮೂಲಕ 83,864 ಕೋಟಿ ರೂ. ನಿರೀಕ್ಷಿಸಿದ್ದು, ಆ ಪೈಕಿ ಡಿಸೆಂಬರ್‌ ಅಂತ್ಯಕ್ಕೆ 60,210 ಕೋಟಿ ರೂ. ಸಂಗ್ರಹವಾಗಿದ್ದು, ಈ ಮೂಲಕ ಶೇ.71.8 ರಷ್ಟು ಪ್ರಗತಿ ಸಾಧಿಸಲಾಗಿದೆ. ಮುದ್ರಾಂಕ ಮತ್ತು ನೋಂದಣಿ ಹೊರತುಪಡಿಸಿ ದರೆ ಇತರೆ ಬಾಬ್ತುಗಳಲ್ಲಿ ತೆರಿಗೆ ಸಂಗ್ರಹದಲ್ಲಿ ಕೊರತೆಯಾಗಿಲ್ಲ.

ಅಬಕಾರಿ, ವಾಣಿಜ್ಯ ಹಾಗೂ ಮೋಟಾರು ತೆರಿಗೆ ಮೂಲದಿಂದಲೇ 55 ಸಾವಿರ ಕೋಟಿ ರೂ.ವರೆಗೆ ಸಂಗ್ರಹವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next