Advertisement

ಧಾರಾಕಾರ ಮಳೆಗೆ ಇಬ್ಬರು ಬಲಿ; ಜನ ಜೀವನ ಅಸ್ತವ್ಯಸ್ತ 

12:14 PM Sep 07, 2017 | Team Udayavani |

ಮೈಸೂರು: ಮಂಗಳವಾರ ಸಂಜೆ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಅರವಿಂದ ನಗರದ ಬಳಿ ಮೋರಿ ಕಟ್ಟಿಕೊಂಡು ಶ್ರೀರಾಂಪುರದ ಎಸ್‌ಬಿಎಂ ಕಾಲೋನಿಯ ಬ್ಲಾಕ್‌ ನಂ.26 ರಿಂದ 31ರವರೆಗಿನ ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಮಳೆನೀರನ್ನು ಹೊರಹಾಕುವಲ್ಲಿ ಹೈರಾಣಾಗಿ, ನಿದ್ರೆ ಇಲ್ಲದೆ ರಾತ್ರಿ ಕಳೆಯಬೇಕಾಯಿತು.

Advertisement

ಇನ್ನು ಗಾಂಧಿನಗರದ ಮೇದರ ಬ್ಲಾಕ್‌ನಲ್ಲಿ ಗುರುಮೂರ್ತಿ ಎಂಬುವವರ ಶಿಥಿಲಗೊಂಡಿದ್ದ ಮಣ್ಣಿನ ಗೋಡೆ ಮನೆಯೊಂದು ಕುಸಿದುಬಿದ್ದಿದ್ದು, ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇನ್ನು ಭಾರೀ ಮಳೆ  ಪರಿಣಾಮ ವಿದ್ಯಾರಣ್ಯಪುರಂ ಪೊಲೀಸ್‌ ಠಾಣೆಯ ವೈರ್‌ಲೆಸ್‌ ಉಪಕರಣಗಳು ಹಾನಿಗೀಡಾಗಿವೆ.

ಪಡುವಾರಹಳ್ಳಿಯಲ್ಲೂ ಮೋರಿಗಳಲ್ಲಿ ಪ್ರವಾಹೋಪಾದಿಯಲ್ಲಿ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಜನ ಮಳೆ ನೀರು ಹೊರಹಾಕಲು ಪರಿತಪಿಸಬೇಕಾಯಿತು. ಭಾರೀ ಮಳೆಯಿಂದ ಮೋರಿಗಳು ತುಂಬಿ ಹರಿದಿದ್ದು ಮಾತ್ರವಲ್ಲದೆ, ಬನ್ನಿಮಂಟಪ, ತಿಲಕ್‌ ನಗರ, ವಿನಾಯಕ ನಗರ ಮತ್ತಿತರೆ ಪ್ರದೇಶಗಳಲ್ಲಿ ಮ್ಯಾನ್‌ಹೋಲ್‌ಗ‌ಳು ಉಕ್ಕಿ ಹರಿದವು.

ಹೀಗಾಗಿ ಕೊಳಚೆ ನೀರು ರಸ್ತೆಗೆ ಹರಿದು ದಾರಿಹೋಕರು ಪರದಾಡಬೇಕಾಯಿತು. ಈ ಮಧ್ಯೆ ಜೆ.ಪಿ.ನಗರದ ಅಕ್ಕ ಮಹಾದೇವಿ ರಸ್ತೆಯಲ್ಲಿ ಉಕ್ಕಿ ಹರಿಯುತ್ತಿದ್ದ ಮ್ಯಾನ್‌ಹೋಲ್‌ ಸರಿಪಡಿಸಲು ಪೌರ ಕಾರ್ಮಿಕ ಬರಿಗೈಲಿ ಕೆಲಸ ಮಾಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಮನೆ ಗೋಡೆ ಕುಸಿದ ಬಾಲಕ ಸಾವು 
ಎಚ್‌.ಡಿ.ಕೋಟೆ:
ಕಳೆದ 2-3 ದಿನಗಳಿಂದ ಸುರಿದ ಧಾರಾಕಾರ ಮಳೆಗೆ ಮನೆಗೋಡೆ ಕುಸಿದು ಬಾಲಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಕೊಡಸೀಗೆ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಸುಮಾರು 7.30 ರಲ್ಲಿ ಸಂಭವಿಸಿದೆ. ಕೊಡಸೀಗೆ ಗ್ರಾಮದ ಶಿವಕುಮಾರಸ್ವಾಮಿ ಮತ್ತು ರೇಖಾ ದಂಪತಿ ಪುತ್ರ ಸಂದೇಶ್‌ಗೌಡ(7) ಮೃತಪಟ್ಟ ದುರ್ದೈವಿ. ಬಾಲಕನನ್ನು ಕಳೆದುಕೊಂಡ ಕುಟುಂಬದ ರೋಧನ ಮುಗಿಲು ಮುಟ್ಟುವಂತಿತ್ತು.

Advertisement

ಘಟನೆ ವಿವರ: ಮೃತ ಬಾಲಕ ಸಂದೇಶ್‌ಗೌಡ ಬೆಳಿಗ್ಗೆ 7.30 ರಲ್ಲಿ ಕೊಡೆಸೀಗೆ ಗ್ರಾಮದ ತನ್ನ ಚಿಕ್ಕತಾತ ಕೊಮರೇಗೌಡರ ಮನೆ ಬಳಿ ಬಂದು ತಾತನನ್ನು ಮಾತನಾಡಿಸಿಕೊಂಡು ತಾತ ಸ್ಕೂಲ್‌ಗೆ ಹೊರಡಲು ಸಮಯವಾಗುತ್ತಿದೆ ಎಂದು ಹೇಳಿ ತಾತ ಹಿಡಿದಿದ್ದ ತನ್ನ ಕೈ ಬಿಡಿಸಿಕೊಂಡು ಮನೆ ಕಡೆ ಮುಖ ಮಾಡುತ್ತಿದಂತೆ ಅಲ್ಲೇ ಸಮೀಪದ ಕೊಮರೇಗೌಡರ ಮನೆ ಗೋಡೆ ಇದ್ದಕ್ಕಿದಂತೆ ಕುಸಿದು ಬಾಲಕನ ಮೇಲೆ ಬಿದ್ದಿದೆ.

ಸಂಪೂರ್ಣವಾಗಿ ಬಾಲಕನ ಮೇಲೆ ಗೋಡೆ ಕುಸಿದ ಪರಿಣಾಮ ಬಾಲಕನ ತಲೆ ಬುರುಡೆ ಛಿದ್ರವಾಗಿತ್ತು. ಘಟನೆಯಲ್ಲಿ ಮತ್ತೂಂದು ತುದಿಯಲ್ಲಿ ನಿಂತಿದ್ದ ಕೊಮರೇಗೌಡರಿಗೂ ಕುಸಿದ ಗೋಡೆ ಕಾಲಿನ ಮೇಲೆ ಬಿದ್ದ ಪರಿಣಾಮ ಅವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ತಹಶೀಲ್ದಾರ್‌ ಎಂ.ನಂಜುಂಡಯ್ಯ ಭೇಟಿ ನೀಡಿ ಬಾಲಕನ ಕುಟುಂಬಕ್ಕೆ ಸಾಂತ್ವನ ಹೇಳಿದರು. ಎಚ್‌.ಡಿ.ಕೋಟೆ ಪೋಲೀಸ್‌ ಠಾಣೆಯ ಸಬ್‌ಇನ್ಸ್‌ಪೆàಕ್ಟರ್‌ ಅಶೋಕ್‌ ಸ್ಥಳಕ್ಕೆ ಪರಿಶಿಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next