Advertisement

ಡೆಂಗ್ಯೂಗೆ ಇಬ್ಬರು ಬಲಿ; ಒಂದು ಶಂಕಿತ ಪ್ರಕರಣ

12:56 AM Aug 29, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಡೆಂಗ್ಯೂ ಜ್ವರದಿಂದ ಓರ್ವರು ಮೃತಪಟ್ಟಿದ್ದು, ಇನ್ನೋರ್ವರು ಶಂಕಿತ ಡೆಂಗ್ಯೂ ಜ್ವರಕ್ಕೆ ಬಲಿಯಾಗಿದ್ದಾರೆ. ಇಬ್ಬರೂ ತೊಕ್ಕೊಟ್ಟು ನಿವಾಸಿಗಳು.

Advertisement

ತೊಕ್ಕೊಟ್ಟು ಕುಂಪಲ ನಿವಾಸಿ ಜಯ ಪ್ರಕಾಶ್‌ ಗಟ್ಟಿ (41) ಮತ್ತು ತೊಕ್ಕೊಟ್ಟು ಚೆಂಬುಗುಡ್ಡೆ ನಿವಾಸಿ ಸುಮತಿ (36) ಮೃತ ಪಟ್ಟವರು. ಜಯಪ್ರಕಾಶ್‌ ಅವರು ಡೆಂಗ್ಯೂ ಜ್ವರ ಹಿನ್ನೆಲೆಯಲ್ಲಿ ಮೂರು ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಯಾವುದೇ ಆಸ್ಪತ್ರೆ ಯಲ್ಲೂ ಚಿಕಿತ್ಸೆ ಫಲಕಾರಿ ಯಾಗದೆ ಬುಧವಾರ ಕೊನೆ ಯುಸಿರೆಳೆದರು. ಸುಮತಿ ಅವರು ಬ್ಯಾಕ್ಟೀರಿಯಲ್‌ ಇನ್‌ಫೆಕ್ಷನ್‌ನಿಂದ ಮೃತಪಟ್ಟಿದ್ದಾರೆ. ಅವರಲ್ಲಿ ಡೆಂಗ್ಯೂ ಲಕ್ಷಣ ಇರಲಿಲ್ಲ. ಪ್ಲೇಟ್‌ಲೆಟ್‌ ಕೂಡ ಒಂದು ಲಕ್ಷಕ್ಕೂ ಮಿಕ್ಕಿತ್ತು ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ನವೀನ್‌ಚಂದ್ರ ತಿಳಿಸಿದ್ದಾರೆ. ಆದರೆ ಸುಮತಿ ಅವರ ನಿಧನಕ್ಕೆ ಶಂಕಿತ ಡೆಂಗ್ಯೂ ಜ್ವರ ಕಾರಣ ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಮನೆಮನೆ ಭೇಟಿ, ಫಾಗಿಂಗ್‌
ಇಬ್ಬರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬಂದಿ ಸ್ಥಳಕ್ಕೆ ತೆರಳಿ ಸುತ್ತಮುತ್ತಲಿನ ಮನೆಗಳಿಗೆ ಭೇಟಿ ಮಾಡಿ ಫಾಗಿಂಗ್‌ ನಡೆಸಿದ್ದಾರೆ. ಅಲ್ಲದೆ ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ, ನೀರು ನಿಲ್ಲದಂತೆ ನೋಡಿಕೊಳ್ಳಲು ಸೂಚಿಸಿದ್ದಾರೆ.

10 ದಾಟಿದ ಸಾವಿನ ಸಂಖ್ಯೆ; 4 ದೃಢ
ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಪದೇ ಪದೇ ಹೇಳುತ್ತಲೇ ಬಂದರೂ ಡೆಂಗ್ಯೂ ಜ್ವರಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಏರುತ್ತಿದೆ. ಜಯಪ್ರಕಾಶ್‌ ಗಟ್ಟಿ ಅವರ ಸಾವಿನೊಂದಿಗೆ ನಾಲ್ವರ ಸಾವು ಡೆಂಗ್ಯೂವಿನಿಂದ ಸಂಭವಿಸಿ ರುವುದು ದೃಢಪಟ್ಟಿದೆ. ಈ ಹಿಂದೆ ನಾಗೇಶ್‌ ಪಡು, ವೀಣಾ ನಾಯಕ್‌, ವಿದ್ಯಾರ್ಥಿನಿ ಶ್ರದ್ಧಾ ಅವರೂ ಮೃತಪಟ್ಟಿದ್ದರು. 4 ಮಂದಿ ಡೆಂಗ್ಯೂ, 6ಕ್ಕೂ ಹೆಚ್ಚು ಮಂದಿ ಶಂಕಿತ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾರೆ.

ಜನ ಜಾಗೃತರಾಗಬೇಕು
ಬೆಂಗಳೂರಿನಲ್ಲಿ ಸುಮಾರು 7 ಸಾವಿರ ಡೆಂಗ್ಯೂ ಪ್ರಕರಣ ದಾಖಲಾಗಿದ್ದು, ಅಲ್ಲಿಗೆ ಹೋಲಿಸಿದರೆ, ದ.ಕ. ಜಿಲ್ಲೆಯಲ್ಲಿ ಡೆಂಗ್ಯೂ ಬಾಧಿತರ ಸಂಖ್ಯೆ ನಿಯಂತ್ರಣದಲ್ಲಿದೆ ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಹೇಳಿದ್ದಾರೆ. ಆದರೆ ಜನ ಮನೆ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಂತು ಲಾರ್ವಾ ಉತ್ಪತ್ತಿಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Advertisement

ಬೆಂಗಳೂರಿನಲ್ಲಿರುವ ಜಿಲ್ಲೆಯ
ಕೆಲವರು ಡೆಂಗ್ಯೂ ಜ್ವರಕ್ಕೊಳಗಾದ ಹಿನ್ನೆಲೆಯಲ್ಲಿ ಜಿಲ್ಲೆಗೆ ಚಿಕಿತ್ಸೆಗೆ ಆಗಮಿಸುತ್ತಾರೆ. ಅಲ್ಲದೆ ಕಡಬ, ಪುತ್ತೂರು ಭಾಗದಲ್ಲಿ ಕೆಲವು ಪ್ರಕರಣಗಳು ವರದಿಯಾಗಿವೆ. ತೊಕ್ಕೊಟ್ಟಿನಲ್ಲಿ ಎರಡು ಪ್ರಕರಣಗಳು ವರದಿಯಾಗಿರುವ ಹಿನ್ನೆಲೆಯಲ್ಲಿ ಉಳ್ಳಾಲ, ಕೋಟೆಕಾರು, ತೊಕ್ಕೊಟ್ಟು ಭಾಗದಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ರಕ್ತದ ಕೊರತೆ ಇಲ್ಲ
ಜಿಲ್ಲಾ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಡೆಂಗ್ಯೂ ಜ್ವರ ಹಿನ್ನೆಲೆಯಲ್ಲಿ ದಾಖಲಾಗುವವರ ಸಂಖ್ಯೆ ಕಡಿಮೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಕೆಲವು ಪ್ರಕರಣಗಳು ದಾಖಲಾಗಿವೆ. ಯಾವುದೇ ಆಸ್ಪತ್ರೆಗಳಲ್ಲಿ ಪ್ಲೇಟ್‌ಲೆಟ್‌, ರಕ್ತದ ಕೊರತೆ ಉಂಟಾಗಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಅಲ್ಲೊಂದು ಇಲ್ಲೊಂದು ಡೆಂಗ್ಯೂ ಪ್ರಕರಣ ಕಂಡುಬರುತ್ತಿವೆ. ಆದರೆ ಮಂಗಳೂರು ನಗರದಲ್ಲಿ ಸಂಪೂರ್ಣ ನಿಯಂತ್ರಣದಲ್ಲಿದೆ. ತೊಕ್ಕೊಟ್ಟು, ಉಳ್ಳಾಲ, ಕೋಟೆಕಾರು ಪರಿಸರದಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ.
-ಶಶಿಕಾಂತ್‌ ಸೆಂಥಿಲ್‌
ದ.ಕ. ಜಿಲ್ಲಾಧಿಕಾರಿ

ಚೆಂಬುಗುಡ್ಡೆ ನಿವಾಸಿ ಸುಮತಿ
ದೇರಳಕಟ್ಟೆ ಯೇನಪೊಯ ಆಸ್ಪತ್ರೆಯಲ್ಲಿ ಹೌಸ್‌ ಕೀಪಿಂಗ್‌ ಕೆಲಸ ಮಾಡುತ್ತಿದ್ದ ಸುಮತಿ (36) ತೊಕ್ಕೊಟ್ಟಿನಲ್ಲಿ ರಿಕ್ಷಾ ಚಾಲಕರಾಗಿರುವ ಉದಯಚಂದ್ರ ಎಂಬವರ ಪತ್ನಿ. ಜ್ವರ ಬಂದು ಹಲವು ದಿನಗಳ ಕಾಲ ಸ್ಥಳೀಯವಾಗಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಶನಿವಾರ ಯೇನಪೊಯ ಆಸ್ಪತ್ರೆಗೆ ದಾಖಲಾಗಿದ್ದರು.

ವೈದ್ಯರು ಜಾಂಡೀಸ್‌ ಇರುವ ಕುರಿತು ಮಾಹಿತಿ ನೀಡಿದ್ದರು. ಬಳಿಕ ಆರೋಗ್ಯ ಸ್ಥಿತಿಯಲ್ಲಿ ಬಹಳಷ್ಟು ಏರುಪೇರಾಗಿದ್ದು, ಪ್ಲೇಟ್‌ಲೆಟ್‌ ಸಂಖ್ಯೆ ಕುಸಿದು ಮೃತಪಟ್ಟಿದ್ದಾರೆ. ಮೂಲತಃ ವರ್ಕಾಡಿಯವರಾದ ಅವರು ಮದುವೆಯ ಬಳಿಕ ಚೆಂಬುಗುಡ್ಡೆಯಲ್ಲಿ ವಾಸವಾಗಿದ್ದರು, ಪತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಕುಂಪಲ ಬಲ್ಯದ ಜಯಪ್ರಕಾಶ್‌ ಗಟ್ಟಿ
ಕುಂಪಲ ಬಲ್ಯ ನಿವಾಸಿ ಜಯಪ್ರಕಾಶ್‌ ಗಟ್ಟಿ (41) ಮೂಲತಃ ಕಲಾವಿದರು. ಅದರಿಂದ ಬರುವ ಆದಾಯ ಸಾಕಾಗದೆ ಟೆಂಪೋ ಚಾಲಕನಾಗಿಯೂ ದುಡಿಯುತ್ತಿದ್ದರು. ಜ್ವರ ಬಂದ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದರು. ಆದರೆ ಬಳಿಕ ಕಣ್ಣು ಮಂಜಾಗಿ ಸಹೋದರನಿಗೆ ಕರೆ ಮಾಡಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಚಿಕಿತ್ಸೆ ನೀಡಿದರೂ ಕೋಮಾಕ್ಕೆ ಜಾರಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ಅವರು ತಾಯಿ, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಡಿಸಿ ನೇತೃತ್ವದ ತಂಡ ಭೇಟಿ: ಖಾದರ್‌
ಉಳ್ಳಾಲ: ಡೆಂಗ್ಯೂ ಪೀಡಿತ ಸ್ಥಳಕ್ಕೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ತಂಡ ಗುರುವಾರ ಭೇಟಿ ನೀಡಲಿದೆ ಎಂದು ಶಾಸಕ ಯು.ಟಿ. ಖಾದರ್‌ ತಿಳಿಸಿದ್ದಾರೆ.

ಅವರು ಡೆಂಗ್ಯೂನಿಂದ ಮೃತಪಟ್ಟ ಚೆಂಬುಗುಡ್ಡೆಯ ಸುಮತಿ ಮತ್ತು ಕುಂಪಲ ಬಲ್ಯದ ಪ್ರಕಾಶ್‌ ಮನೆಗೆ ಭೇಟಿ ನೀಡಿ ಮಾತನಾಡಿದರು. ಉಳ್ಳಾಲ ವ್ಯಾಪ್ತಿಯಲ್ಲಿ ಕಟ್ಟಡ ಕಾಮಗಾರಿಗಳು ನಡೆಯುತ್ತಿದ್ದು, ನೀರು ಕಟ್ಟಡದ ನೆಲ ಮಾಳಿಗೆಯಲ್ಲಿ ಸಂಗ್ರಹಗೊಂಡು ಸಮಸ್ಯೆ ಉದ್ಭವಿಸಿದೆ. ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. ಕಟ್ಟಡ ಮಾಲಕರು ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಅಂತಹ ಕಟ್ಟಡಗಳ ಲೈಸನ್ಸ್‌ ರದ್ದು ಮತ್ತು ವಿದ್ಯುತ್‌ ಕಡಿತಗೊಳಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುವುದು. ಆರೋಗ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ é ವಹಿಸಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next