ಶ್ರೀನಗರ: ಪುಲ್ವಾಮಾ ಸಿಆರ್‌ಪಿಎಫ್ ಯೋಧರ ಮೇಲೆ ಭೀಕರ ದಾಳಿ ನಡೆದ ಬಳಿಕ ಸೇನಾ ಪಡೆಗಳು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದು, ಶುಕ್ರವಾರ ಬಾರಾಮುಲ್ಲಾದ ಸೋಪುರ್‌ನಲ್ಲಿ ಕಾರ್ಯಾಚರಣೆ ನಡೆಸಿ ಇಬ್ಬರು ಜೈಶ್ -ಎ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ ಉಗ್ರರನ್ನು ಹತ್ಯೆಗೈದಿದ್ದಾರೆ.
ಇಬ್ಬರು ಪ್ರಮುಖ ಜೈಶ್ ಉಗ್ರರನ್ನು ಹತ್ಯೆಗೈಯಲಾಗಿದ್ದು, ಕಾರ್ಯಾಚರಣೆ ವೇಳೆ ಯೋಧರಿಗೆ ಯಾವುದೇ ಗಾಯಗಳಾಗಿಲ್ಲ .ಉಗ್ರರ ಗುರುತನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ ಎಂದು ಸೇನಾ ಮೂಲಗಳು ವರದಿ ಮಾಡಿವೆ.
ಸೇನಾ ಕಾರ್ಯಾಚರಣೆ ಸಂಪೂರ್ಣವಾಗಿ ಮುಗಿಸಿ ,ಉಗ್ರರ ಶವಗಳನ್ನು ತೆರವುಗೊಳಿಸುವ ವರೆಗೂ ಸಾರ್ವಜನಿಕರಿಗೆ ಸ್ಥಳಕ್ಕೆ ಆಗಮಿಸದಂತೆ ನಿರ್ಬಂಧ ವಿಧಿಸಲಾಗಿದೆ.
ಉಗ್ರರು ಹತ್ಯೆಗೀಡಾದ ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಯುದ್ಧ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಉತ್ತರಪ್ರದೇಶದ ಎಟಿಎಸ್ ಶುಕ್ರವಾರ ಜೈಶ್ ಉಗ್ರಗಾಮಿ ಸಂಘಟನೆಯ ಇಬ್ಬರನ್ನು ಬಂಧಿಸಿದ್ದರು. ಕುಲ್ಗಾಮ್ ನ ಶಹನವಾಝ್ ಅಹಮ್ಮದ್ ಹಾಗೂ ಪುಲ್ವಾಮಾದ ಅಖಿಬ್ ಅಹ್ಮದ್ ಮಲಿಕ್ ಬಂಧಿತ ಉಗ್ರರು ಎಂದು ತಿಳಿದು ಬಂದಿದೆ.