ನವದೆಹಲಿ: ಭದ್ರತಾ ಪಡೆಯ ಎನ್ ಕೌಂಟರ್ ಗೆ ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಇಬ್ಬರು ಸ್ಥಳೀಯ ಉಗ್ರರು ಹತ್ಯೆಗೀಡಾಗಿರುವ ಘಟನೆ ಸೋಮವಾರ (ಮೇ 30) ದಕ್ಷಿಣ ಕಾಶ್ಮೀರದ ಪುಲ್ವಾಮಾದ ಗುಂಡಿಪೋರಾ ಗ್ರಾಮದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಹುಮನಾಬಾದ್: ಆಸ್ತಿ ವಿವಾದ; ತಂದೆಯನ್ನೇ ಕಟ್ಟಿಗೆಯಿಂದ ಹೊಡೆದು ಕೊಲೆಗೈದ ಮಗ
ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ಭಾನುವಾರ ಸಂಜೆಯಿಂದ ಗುಂಡಿನ ಕಾಳಗ ಪ್ರಾರಂಭವಾಗಿತ್ತು. ಸುಮಾರು 13 ಗಂಟೆಗಳ ದೀರ್ಘಕಾಲದ ಗುಂಡಿನ ಚಕಮಕಿ ನಂತರ ಭದ್ರತಾ ಪಡೆಯ ಎನ್ ಕೌಂಟರ್ ಗೆ ಇಬ್ಬರು ಸ್ಥಳೀಯ ಜೈಶ್ ಉಗ್ರರು ಸಾವಿಗೀಡಾಗಿರುವುದಾಗಿ ವರದಿ ತಿಳಿಸಿದೆ.
ಮೇ 13ರಂದು ಪುಲ್ವಾಮಾದ ಗುಡೋರಾದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ರಿಯಾಜ್ ಅಹ್ಮದ್ ಅವರನ್ನು ಹತ್ಯೆಗೈದ ಘಟನೆಯಲ್ಲಿ ಶಾಮೀಲಾಗಿದ್ದ ಜೈಶ್ ಉಗ್ರ ಅಬಿದ್ ಶಾ ಸೇರಿದಂತೆ ಇಬ್ಬರು ಹತ್ಯೆಗೀಡಾಗಿದ್ದಾರೆ ಎಂದು ಕಾಶ್ಮೀರದ ಐಜಿಪಿ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಘಟನಾ ಸ್ಥಳದಲ್ಲಿ ಎರಡು ಎಕೆ 47 ರೈಫಲ್ಸ್ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿರುವುದಾಗಿ ಭದ್ರತಾ ಪಡೆ ಮೂಲಗಳು ತಿಳಿಸಿವೆ. ಖಚಿತ ಮಾಹಿತಿ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಿದ್ದು, ಉಗ್ರರು ಗುಂಡಿನ ದಾಳಿ ನಡೆಸಿದಾಗ ಅದಕ್ಕೆ ಭದ್ರತಾಪಡೆಯ ಪ್ರತೀ ದಾಳಿಯಲ್ಲಿ ಇಬ್ಬರು ಉಗ್ರರು ಸಾವನ್ನಪ್ಪಿರುವುದಾಗಿ ವರದಿ ಹೇಳಿದೆ.