ಮುಂಬಯಿ: ಆಪರೇಷನ್ ಕಮಲ ಸಾಧ್ಯತೆಯ ವರದಿಯ ಬೆನ್ನಲ್ಲೇ ಮೈತ್ರಿ ಸರ್ಕಾರಕ್ಕೆ ಮೊದಲ ಶಾಕ್ ಎನ್ನುವಂತೆ ಇಬ್ಬರು ಪಕ್ಷೇತರ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಾಸ್ ಪಡೆದಿದ್ದಾರೆ.
ಮುಂಬಯಿಯ ಹೊಟೇಲ್‌ನಲ್ಲಿ ಎಎನ್‌ಐನೊಂದಿಗೆ ಮಾತನಾಡಿದ ರಾಣಿಬೆನ್ನೂರು ಪಕ್ಷೇತರ ಶಾಸಕ, ಮಾಜಿ ಅರಣ್ಯ ಸಚಿವ ಆರ್.ಶಂಕರ್ ಮತ್ತು ಮುಳಬಾಗಿಲು ಪಕ್ಷೇತರ ಶಾಸಕ ಎಚ್.ನಾಗೇಶ್ ಅವರು ಬೆಂಬಲ ವಾಪಾಸ್ ಪಡೆಯುವುದಾಗಿ ಹೇಳಿದ್ದಾರೆ.
ಎಚ್.ನಾಗೇಶ್ ಮಾತನಾಡಿ , ಸುಭದ್ರ ಸರ್ಕಾರ ರಚನೆಯಾಗಬೇಕಿದ್ದು , ಈಗಿನ ಮೈತ್ರಿ ಸರ್ಕಾರದಲ್ಲಿ ಯಾವುದೇ ಕೆಲಸಗಳನ್ನು ಮಾಡಲಾಗುತ್ತಿಲ್ಲ. ದಲಿತರಿಗಾಗಿ, ರೈತರಿಗಾಗಲಿ ಕೆಲಸಗಳಾಗುತ್ತಿಲ್ಲ. ಸ್ಥಿರ ಸರ್ಕಾರ ಬೇಕಾಗಿದೆ. ಬಿಜೆಪಿ ಸ್ಥಿರ ಸರ್ಕಾರ ನಡೆಸುತ್ತದೆ ಕರ್ನಾಟಕದ ಜನತೆಗೆ ಬದಲಾವಣೆ ಬೇಕಿದೆ.ನಾವು ಬೇಷರತ್ ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದಿದ್ದಾರೆ.
ಆರ್ ಶಂಕರ್ ಮಾತನಾಡಿ, ನಾನು ತಾಲೂಕಿನ ಜನತೆಯ ಆಶೀರ್ವಾದದಿಂದ ಶಾಸಕನಾದೆ. 7 ತಿಂಗಳ ಕಾಲ ಸಚಿವನಾಗಿದ್ದೆ , ನನ್ನ ಕೆಲಸ ನನಗೆ ತೃಪ್ತಿ ತಂದಿದೆ ಆದರೆ ಇನ್ನೂ ಹೆಚ್ಚಿನ ಕೆಲಸ ಮಾಡಲು ಅವಕಾಶ ಈ ಸರ್ಕಾರದಲ್ಲಿ ಲಭ್ಯವಾಗಲಿಲ್ಲ. ಸರ್ಕಾರ ಸ್ಪಂದಿಸಲಿಲ್ಲ. ಬಹಳ ನೋವಿನಿಂದ ಬೆಂಬಲ ವಾಪಾಸ್ ಪಡೆಯುತ್ತಿದ್ದೇನೆ ಎಂದಿದ್ದಾರೆ.
ಇಬ್ಬರೂ ಬೆಂಗಳೂರಿಗೆ ತಕ್ಷಣ ವಾಪಾಸಾಗಿ ರಾಜ್ಯಪಾಲರನ್ನು ಭೇಟಿಯಾಗಿ ಬೆಂಬಲ ವಾಪಾಸ್ ಪಡೆದಿರುವ ಪತ್ರವನ್ನು ನೀಡಲಿದ್ದಾರೆ ಎಂದು ತಿಳಿದು ಬಂದಿದೆ.