ಕೋಲ್ಕತ್ತಾ: ದಿನವೊಂದಕ್ಕೆ ಅದೆಷ್ಟೋ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ ಅದರಲ್ಲಿ ಕೆಲವೊಂದು ಸಮಾಜಕ್ಕೆ ಉತ್ತಮ ಸಂದೇಶ ನೀಡಿದರೆ ಇನ್ನು ಕೆಲವು ಕೆಟ್ಟ ಸಂದೇಶ ಸಾರುವಂತಿರುತ್ತದೆ. ಆದರೆ ಇಲ್ಲಿ ನಾವು ಹೇಳ ಹೊರಟಿರುವ ವಿಡಿಯೋ ದೇಶದ ರಾಷ್ಟ್ರ ಗೀತೆಗೆ ಅಪಮಾನ ಮಾಡಿರುವಂತದ್ದು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಇಬ್ಬರು ಯುವತಿಯರು ತಮ್ಮ ಕೈಯಲ್ಲಿ ಸಿಗರೇಟ್ ಹಿಡಿದು ವಿಚಿತ್ರ ಧ್ವನಿಯಲ್ಲಿ ಭಾರತದ ರಾಷ್ಟ್ರಗೀತೆಯನ್ನು ಹಾಡುತ್ತಿದ್ದಾರೆ. ಈ ವಿಡಿಯೋವನ್ನು ಯುವತಿಯೊಬ್ಬಳು ತನ್ನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸಾಕಷ್ಟು ಟೀಕೆಗಳು ಈ ಯುವತಿಯರ ವಿರುದ್ಧ ವ್ಯಕ್ತವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋ ಆಧರಿಸಿ ವಕೀಲ ಅತ್ರಯೀ ಹಾಲ್ದರ್ ಅವರು ಲಾಲ್‌ಬಜಾರ್ ಸೈಬರ್ ಘಟಕ ಹಾಗೂ ಬಾರಕ್‌ಪುರದಲ್ಲಿ ಯುವತಿರ ವಿರುದ್ಧ ದೂರು ದಾಖಲಿಸಿದ್ದಾರೆ.
ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಬಗ್ಗೆ ಸಾಕಷ್ಟು ಟೀಕೆಗಳು ಬರುತ್ತಿದ್ದಂತೆ ಯುವತಿ ತನ್ನ ಫೇಸ್ ಬುಕ್ ಖಾತೆಯಿಂದ ವಿಡಿಯೋ ಡಿಲೀಟ್ ಮಾಡಿದ್ದಾಳೆ.
ಈ ವಿಡಿಯೋದಲ್ಲಿ ಇಬ್ಬರು ಯುವತಿಯರು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡು ಬಾಯಿಗೆ ಬಂದಂತೆ ರಾಷ್ಟ್ರಗೀತೆಯನ್ನು ಹಾಡಿದ್ದಾರೆ ಅಲ್ಲದೆ ಕೈಯಲ್ಲಿರುವ ಸಿಗರೇಟನ್ನು ತೋರಿಸುತ್ತಾ ಇದು ಧ್ವಜ… ಧ್ವಜ… ಎಂದು ಹೇಳುವುದನ್ನು ನೋಡಬಹುದು.
ಸದ್ಯ ಯುವತಿಯರ ವಿರುದ್ಧ ಬಾರಾಕ್ ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.