Advertisement

ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಮತ್ತೆರಡು ಪ್ಲಾಟ್ ಫಾರ್ಮ್

09:36 AM Sep 15, 2019 | Suhan S |

ಹುಬ್ಬಳ್ಳಿ: 2020ರ ವೇಳೆಗೆ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಇನ್ನೂ 2 ಪ್ಲಾಟ್ಫಾರ್ಮ್ ನಿರ್ಮಿಸಲಾಗುವುದು ಎಂದು ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

Advertisement

ಇಲ್ಲಿನ ರೈಲು ನಿಲ್ದಾಣದಲ್ಲಿ ಶನಿವಾರ ಹುಬ್ಬಳ್ಳಿ-ಚೆನ್ನೈ ಸೆಂಟ್ರಲ್ ವಾರದಲ್ಲಿ 2 ದಿನ ಸಂಚರಿಸುವ ರೈಲಿನ ಶುಭಾರಂಭ ಹಾಗೂ ಅಣ್ಣಿಗೇರಿ-ಹುಲಕೋಟಿ ನಡುವಿನ ಜೋಡಿ ರೈಲು ಮಾರ್ಗದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಪ್ಲಾಟ್ಫಾರ್ಮ್ಗಳ ಸಂಖ್ಯೆ ಹೆಚ್ಚಿಸುವುದು ಅವಶ್ಯಕವಾಗಿದೆ. ಪ್ಲಾಟ್ಫಾರ್ಮ್ಗಳನ್ನು ನಿರ್ಮಿಸಲು ಜಾಗ ಕೂಡ ಇದೆ ಎಂದರು.

ಹುಬ್ಬಳ್ಳಿ, ಬೆಳಗಾವಿ ಹಾಗೂ ಬೆಂಗಳೂರು ರೈಲು ನಿಲ್ದಾಣಗಳನ್ನು ಮಾದರಿ ರೈಲು ನಿಲ್ದಾಣಗಳಾಗಿ ರೂಪಿಸಲಾಗುವುದು. ರೈಲು ಸಂಚಾರ ಅಭಿವೃದ್ಧಿಪಡಿಸಲು ಕೇಂದ್ರ ಸರಕಾರ ಅಗತ್ಯ ಅನುದಾನ ನೀಡುತ್ತಿದೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಉತ್ತರ ಕರ್ನಾಟಕದ ಪ್ರಹ್ಲಾದ ಜೋಶಿ ಹಾಗೂ ಸುರೇಶ ಅಂಗಡಿ ಕೇಂದ್ರ ಸಚಿವರಾಗಿದ್ದು, ಉಭಯ ಸಚಿವರು ಈ ಭಾಗದ ಅಭಿವೃದ್ಧಿಗೆ ಕೊಡುಗೆ ನೀಡುವ ಮೂಲಕ ಜನರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ರೈಲಿಗೆ ಹೊಸ ಬೋಗಿಗಳನ್ನು ಜೋಡಿಸಿದರೆ ಅನುಕೂಲವಾಗುತ್ತದೆ. ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ನಿಲ್ದಾಣದಲ್ಲಿ ಆಟೋ ಪ್ರಿಪೇಡ್‌ ವ್ಯವಸ್ಥೆ ಮಾಡಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಬೇಕು ಎಂದರು.

Advertisement

ಸಂಸದ ಶಿವಕುಮಾರ ಉದಾಸಿ ಮಾತನಾಡಿ, ರಾಜ್ಯದಲ್ಲಿ ಸದ್ಯ 3800 ಕಿಮೀ ರೈಲು ಮಾರ್ಗವಿದ್ದು, ಅದನ್ನು ಇನ್ನಷ್ಟು ವಿಸ್ತರಿಸಬೇಕು. ಶಿಕಾರಿಪುರ-ರಾಣಿಬೆನ್ನೂರ ಮಾರ್ಗ ನಿರ್ಮಾಣ ತ್ವರಿತಗೊಳಿಸಬೇಕು. ಗದಗ-ಯಲವಿಗಿ ರೈಲು ಮಾರ್ಗ ಶೀಘ್ರದಲ್ಲೇ ಆರಂಭಿಸಬೇಕು. ಗದಗ ರೈಲು ನಿಲ್ದಾಣವನ್ನು ಅಪ್‌ಗ್ರೇಡ್‌ ಮಾಡುವುದು ಅವಶ್ಯ ಎಂದು ಹೇಳಿದರು.

ಸಂಸದ ಸಂಗಣ್ಣ ಕರಡಿ ಮಾತನಾಡಿ, ಕೊಪ್ಪಳ ರೈಲು ನಿಲ್ದಾಣವನ್ನು ನವೀಕರಿಸಬೇಕು. ಕೊಪ್ಪಳಕ್ಕೆ ವಿಮಾನ ನಿಲ್ದಾಣ ಒದಗಿಸಬೇಕು ಎಂದು ತಿಳಿಸಿದರು.

ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್‌ ಮಾತನಾಡಿ, ಹುಬ್ಬಳ್ಳಿ-ಚೆನ್ನೈ ರೈಲು ವಾರಕ್ಕೆರಡು ಬಾರಿ ಗದಗ, ಕೊಪ್ಪಳ, ಹೊಸಪೇಟೆ, ಬಳ್ಳಾರಿ, ಗುಂತಕಲ್, ರೇಣಿಗುಂಟ ಮಾರ್ಗವಾಗಿ ಸಾಗಲಿದೆ ಎಂದರು.

ಅಣ್ಣಿಗೇರಿ-ಹುಲಕೋಟಿ ಮಧ್ಯೆ 10.06 ಕಿಮೀ ಉದ್ದದ ಜೋಡಿ ಮಾರ್ಗವನ್ನು 50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಹೊಸಪೇಟೆ-ತಿನೈಘಾಟ್-ವಾಸ್ಕೊಡಗಾಮ 352 ಕಿಮೀ ಜೋಡಿಮಾರ್ಗ ನಿರ್ಮಾಣದ ಮೊದಲ ಹಂತದ ಕಾಮಗಾರಿ ಭಾಗವಾಗಿ ಇದನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ಮಾತನಾಡಿದರು. ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ನೈಋತ್ಯ ರೈಲ್ವೆ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next