ಕಲಬುರಗಿ: ದೇಶಕ್ಕೆ ಸ್ವಾತಂತ್ರ್ಯ ದೊರೆತು ಪ್ರಜಾಪ್ರಭುತ್ವದ ತಳಹದಿ ಮೇಲೆ ಎಲ್ಲರನ್ನು ಸಮೃದ್ಧಿಯತ್ತ ಕೊಂಡೋಯ್ಯುವ ಕಾರ್ಯವಾಗುತ್ತಿದ್ದು, ಆಗಸ್ಟ್ 15ನೇ ಸ್ವಾತಂತ್ರ್ಯ ದಿನ ಹಾಗೂ ಜನವರಿ 26 ಗಣರಾಜ್ಯ ದಿನ ಇವೆರಡು ದಿನಗಳು ದೇಶದ ಹಬ್ಬವಾಗಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತ ವತಿಯಿಂದ ಹಮ್ಮಿಕೊಂಡಿದ್ದ ಭಾರತದ 69ನೇ ಗಣರಾಜ್ಯೋತ್ಸವ ದಿನಾಚರಣೆಯ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಹಾಗೂ ವಿವಿಧ ಪಡೆಗಳಿಂದ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧೀಜಿ, ಸುಭಾಷ್‌ಚಂದ್ರ ಬೋಸ್, ಜವಾಹರಲಾಲ್ ನೆಹರು, ಭಗತ್ ಸಿಂಗ್ ಹೀಗೆ ಅಸಂಖ್ಯಾತ
ಹೋರಾಟಗಾರಿಂದ ದೇಶವು 1947ರಲ್ಲಿ ಬ್ರಿಟಿಷರಿಂದ ಮುಕ್ತಿಗೊಂಡಿತು. ಡಾ| ಬಾಬಾ ಸಾಹೇಬ್ ಅಂಬೇಡ್ಕರ್
ಅವರನ್ನು ನಾವು ಯಾವತ್ತು ಮರೆಯುವಂತಿಲ್ಲ. ಜಗತ್ತು ಕಂಡಿರುವ ಅದ್ಭುತ ಮೇಧಾವಿ ಹಾಗೂ ಸಂಶೋಧಕರು
ಅವರಾಗಿದ್ದರು. ಎಲ್ಲ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ರಚಿಸಿದ ಭಾರತದ ಸಂವಿಧಾನವನ್ನು ಜನವರಿ 26, 1950ರಂದು ಜಾರಿಗೆ ತರಲಾಯಿತು.
ಬಹುಶಃ ಅಂಬೇಡ್ಕರರು ಓದಿದ ಗ್ರಂಥವೇ ಇಲ್ಲವೇನೋ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನಾಲ್ಕುವರೆ ವರ್ಷದಲ್ಲಿ ಜನಪರ ಆಡಳಿತ ನೀಡಿದ್ದಾರೆ. ರೈತರ 8 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಲಾಗಿದೆ. 34 ಲಕ್ಷ ಕ್ವಿಂಟಾಲ್ ತೊಗರಿ ಖರೀದಿಸಲಾಗಿದೆ. 371(ಜೆ)ನೇ ಕಲಂ ಹೈದ್ರಾಬಾದ ಕರ್ನಾಟಕದ ಜನರಿಗೆ ಸಹಾಯಕವಾಗಿದೆ. ಹೈ.ಕ. ಅಭಿವೃದ್ಧಿ ಮಂಡಳಿ ಸ್ಥಾಪಿಸಿ ನಾಲ್ಕುವರೆ ಸಾವಿರ ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಹೇಳಿದರು.
ಭಾರತದ 69ನೇ ಗಣರಾಜ್ಯೋತ್ಸವ ದಿನಾಚರಣೆ ಸಮಾರಂಭದಲ್ಲಿ ಜಿಲ್ಲಾ ಸಶಸ್ತ್ರ ಪೊಲೀಸ್ ಪಡೆಯ ಆರ್ .ಪಿ.ಐ. ಚೆನ್ನಬಸವ ನೇತೃತ್ವದಲ್ಲಿ ನಡೆದ ಪರೇಡ್‌ನಲ್ಲಿ ಡಿ.ಎ.ಆರ್., ಕೆ.ಎಸ್.ಆರ್.ಪಿ., ಸಿವಿಲ್ ಪೊಲೀಸ್, ಗೃಹರಕ್ಷಕ ದಳ, ಅಗ್ನಿಶಾಮಕ ದಳ, ಅರಣ್ಯ ಕಾರ್ಯಪಡೆ, ಅಬಕಾರಿ ಇಲಾಖೆ, ಎನ್‌ಸಿಸಿ ಬಾಲಕರು, ತಾರಫೈಲ್ ಸರ್ಕಾರಿ ಪ್ರೌಢಶಾಲೆ, ಸ್ಕೌಟ್ಸ್ ಬಾಲಕರು, ಭಾರತ ಸೇವಾದಳದ ಬಾಲಕಿಯರು, ಜವಾಹರ ನವೋದಯ ಶಾಲೆ, ಗೈಡ್ಸ್ ಬಾಲಕಿಯರು, ಕೆ.ಸಿ.ಇ.ಡಿ.ಟಿ. ಬಾಲಕಿಯರ ಪ್ರೌಢಶಾಲೆ, ರೆಡ್‌ಕ್ರಾಸ್ ಶಾಖೆ, ಸರ್ಕಾರಿ ಅಂಧ ಬಾಲಕರ ವಸತಿ ಶಾಲೆ ಸೇರಿದಂತೆ ಒಟ್ಟು 15 ತುಕಡಿಗಳಿಂದ ಸಚಿವರು ಪರೇಡ್ ವಂದನೆ ಸ್ವೀಕರಿಸಿದರು. ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿದ್ದು ಸಿರಸಗಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಇಲಿಯಾಸ್ ಬಾಗವಾನ್, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹ್ಮದ್ ಅಸಗರ ಚುಲಬುಲ್, ಮಹಾನಗರಪಾಲಿಕೆ ಮಹಾಪೌರ ಶರಣುಕುಮಾರ ಮೋದಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತಾ, ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ಶಶಿಕುಮಾರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಹೆಚ್ಚುವರಿ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಆಕೃತಿ ಸಾಗರ, ಕಲಬುರಗಿ ಸಹಾಯಕ ಆಯುಕ್ತೆ ಬಿ. ಸುಶೀಲಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಯಪ್ರಕಾಶ ಹಾಗೂ ಇನ್ನಿತರ ಅಧಿಕಾರಿಗಳು, ಗಣ್ಯರು ಪಾಲ್ಗೊಂಡಿದ್ದರು.