ಶಿಲ್ಲಾಂಗ್ : ಮೇಘಾಲಯವನ್ನು ವರ್ಷಗಳ ಕಾಲ ಆಳಿದ ಎರಡು ಕುಟುಂಬಗಳು ರಾಜ್ಯಕ್ಕಾಗಿ ಏನನ್ನೂ ಮಾಡಲಿಲ್ಲ ಮತ್ತು ಬಡವರಿಗಾಗಿ ಮೀಸಲಾದ ಹಣದಿಂದ ತಮ್ಮ ಖಜಾನೆಯನ್ನು ತುಂಬಿಕೊಂಡಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಆರೋಪಿಸಿದ್ದಾರೆ.
ಪಶ್ಚಿಮ ಗರೋ ಹಿಲ್ಸ್‌ನ ದಾಲು ಬ್ಲಾಕ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಎರಡು ಕುಟುಂಬಗಳಿಂದ ಮೇಘಾಲಯವನ್ನು ಮುಕ್ತಗೊಳಿಸಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಮಯ ಬಂದಿದೆ ಎಂದರು. “ಮುಕುಲ್ ಸಂಗ್ಮಾ ಹಲವಾರು ವರ್ಷಗಳ ಕಾಲ ರಾಜ್ಯವನ್ನು ಆಳಿದರು, ಕಾನ್ರಾಡ್ ಸಂಗ್ಮಾ ಅವರ ಕುಟುಂಬವು ಹಲವು ವರ್ಷಗಳ ಕಾಲ ಅಧಿಕಾರದಲ್ಲಿತ್ತು. ರಾಜ್ಯದಲ್ಲಿ ಏನೂ ಆಗಿಲ್ಲ. ಈ ಎರಡು ಕುಟುಂಬಗಳು ಏನು ಮಾಡಿದವು? ಎಂದು ಶಾ ಪ್ರಶ್ನಿಸಿದರು.
“ಈ ಎರಡು ಕುಟುಂಬಗಳು ಭ್ರಷ್ಟಾಚಾರದಲ್ಲಿ ತೊಡಗಿವೆ ಮತ್ತು ಬಡವರ ಹಣದಿಂದ ತಮ್ಮ ಖಜಾನೆಯನ್ನು ತುಂಬಿಕೊಂಡಿವೆ. ಈ ಎರಡು ಕುಟುಂಬಗಳಿಂದ ಮೇಘಾಲಯವನ್ನು ಮುಕ್ತಗೊಳಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಮಯ ಬಂದಿದೆ,” ಎಂದರು.
ರಾಜ್ಯದ ಅಭಿವೃದ್ಧಿಗೆ ಕೇಂದ್ರ ಕಳುಹಿಸುತ್ತಿರುವ ಹಣವನ್ನು ಕಾನ್ರಾಡ್ ಸಂಗ್ಮಾ ಸರಕಾರ ತಡೆಯುತ್ತಿದೆ ಎಂದು ಶಾ ಆರೋಪಿಸಿದರು. ರಾಜ್ಯದಲ್ಲಿ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್ ಡಿಎ ಸರ್ಕಾರದ ಭಾಗವಾಗಿದ್ದ ಬಿಜೆಪಿ, ಚುನಾವಣೆಗೆ ಮುನ್ನ ಮೈತ್ರಿ ಮುರಿದು ಎಲ್ಲಾ 60 ವಿಧಾನಸಭಾ ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.ಮೇಘಾಲಯದಲ್ಲಿ ಫೆಬ್ರವರಿ 27 ರಂದು ಮತದಾನ ನಡೆಯಲಿದ್ದು, ಮಾರ್ಚ್ 2 ರಂದು ಮತ ಎಣಿಕೆ ನಡೆಯಲಿದೆ.
ದಲುವಿನ ಬಿಜೆಪಿ ಕಾರ್ಯಕರ್ತ ನಿಕು ಸಹಾ ಜಿಯವರ ಮನೆಯಲ್ಲಿ ಶಾ ಅವರು ಶರ್ಮಾ ಅವರೊಂದಿಗೆ ಊಟ ಮಾಡಿದರು.