ಬೆಂಗಳೂರು: ಇಂದಿರಾನಗರ ಸುತ್ತಮುತ್ತಲ ಭಾಗದಲ್ಲಿ ಕನ್ನಡ ರಾಜ್ಯೋತ್ಸವ, ಮಹಾನುಭಾವರ ಜಯಂತ್ಯುತ್ಸವ ಆಚರಣೆ ನೆಪದಲ್ಲಿ ಸ್ಥಳೀಯ ಅಂಗಡಿ ಮಾಲೀಕರು, ವ್ಯಾಪಾರಿಗಳನ್ನು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು, ಇತ್ತೀಚೆಗೆ ಸ್ಟೋರ್ ಮಾಲೀಕರೊಬ್ಬರಿಗೆ ನಕಲಿ ಗನ್ ತೋರಿಸಿ ಬೆದರಿಸಿದ ಆರೋಪದಲ್ಲಿ ಜೈಲು ಸೇರಿದ್ದಾರೆ.
ಮೊಹಮದ್ ಇಕ್ಬಾಲ್, ಜಗದೀಶ್ ಜೈಲು ಸೇರಿದ ಆರೋಪಿಗಳು. ಕನಕ ಜಯಂತಿ ಆಚರಣೆ ಸಲುವಾಗಿ ಸ್ಥಳೀಯ ವ್ಯಾಪಾರಿಗಳ ಬಳಿ ನ.29ರಂದು ಹಣ ವಸೂಲಿ ಮಾಡುತ್ತಿದ್ದ ಆರೋಪಿಗಳು, ಮಧ್ಯಾಹ್ನ 1.45ರ ಸುಮಾರಿಗೆ 80 ಅಡಿ ರಸ್ತೆಯಲ್ಲಿರುವ ದಿ ವೀಲ್ಸ್ ಲೈಫ್ಸ್ಟೈಲ್ ಮಳಿಗೆಗೆ ತೆರಳಿ, ಎರಡು ಸಾವಿರ ರೂ. ನೀಡುವಂತೆ ಸಿಬ್ಬಂದಿಗೆ ಬೆದರಿಸಿದ್ದಾರೆ.
ಅಷ್ಟಕ್ಕೆ ಸುಮ್ಮನಾಗದೆ, ದುಬಾರಿ ಜರ್ಕಿನ್, ವಿದೇಶಿ ಬ್ರಾಂಡ್‌ನ ಸುಗಂಧ ದ್ರವ್ಯ ಕೊಡಿ ಎಂದಿದ್ದಾರೆ. ಈ ವೇಳೆ ಅಲ್ಲಿನ ಸಿಬ್ಬಂದಿ ಕೌಶಿಕ್, ಮಾಲೀಕರ ಬಳಿ ಮಾತನಾಡಿ ಹಣ ನೀಡುವುದಾಗಿ ತಿಳಿಸಿದ್ದಾರೆ. ಇದರಿಂದ ಸಿಟ್ಟೆಗೆದ್ದ ಇಕ್ಬಾಲ್ ತನ್ನ ಜೇಬಿನಲ್ಲಿದ್ದ ಗನ್ ತೆಗೆದು ತೋರಿಸಿ ಹಣ ಹಾಗೂ ಜರ್ಕಿನ್ ನೀಡದಿದ್ದರೆ ಸುಡುವುದಾಗಿ ಹೆದರಿಸಿದ್ದಾನೆ.
ಕೆಲವೇ ನಿಮಿಷಗಳಲ್ಲಿ ಬಂದ ಪೊಲೀಸರು!: ಆರೋಪಿಗಳಿಬ್ಬರು ಗನ್ ತೋರಿಸಿದ ಕೂಡಲೇ ಹೆದರಿದ ಕೌಶಿಕ್, ಹಣ ಹಾಗೂ ಜರ್ಕಿನ್ ನೀಡಲು ಒಪ್ಪಿಕೊಂಡು ನೀರುಕೊಟ್ಟು ಉಪಚರಿಸಿದ್ದಾರೆ. ಜತೆಗೆ, ಮೊದಲನೇ ಮಹಡಿಯಲ್ಲಿರಲು ಹೇಳಿ ಹಣ ತರುವುದಾಗಿ ಹೋಗಿದ್ದಾರೆ. ಆರೋಪಿಗಳು ಮೊದಲ ಮಹಡಿ ಕಡೆಗೆ ಹೋಗುತ್ತಿದ್ದಂತೆ “ಡಯಲ್ 100’ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ.
ನಿಯಂತ್ರಣ ಕೊಠಡಿಯಿಂದ ಬಂದ ಮಾಹಿತಿ ಆಧರಿಸಿ ಕೆಲವೇ ನಿಮಿಷಗಳಲ್ಲಿ ಇಂದಿರಾನಗರ ಠಾಣೆ ಇನ್ಸ್‌ಪೆಕ್ಟರ್ ಹಾಗೂ ಇತರೆ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದಾರೆ. ಆಗ ತಪ್ಪಿಸಿಕೊಳ್ಳಲು ಯತ್ನಿಸಿದ ಇಬ್ಬರೂ ಆರೋಪಿಗಳನ್ನು ಬಂಧಿಸಿ, ಅವರ ಬಳಿಯಿದ್ದ ಗನ್ ಪರಶೀಲಿಸಿದಾಗ ಅದು ಫ್ಲಾಸ್ಟಿಕ್ ಗನ್ ಎಂದು ಗೊತ್ತಾಗಿದೆ.
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 384 (ಸುಲಿಗೆ), 506 (ಬೆದರಿಕೆ) ಅಡಿ ಪ್ರಕರಣ ದಾಖಲಿಸಿಕೊಂಡು ಅದೇ ದಿನ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದರು.
ಆರೋಪಿಗಳು ಈ ಹಿಂದೆಯೂ ಹಲವು ವ್ಯಾಪಾರಿಗಳ ಬಳಿ ಹಣ ವಸೂಲಿ ಮಾಡಿದ್ದಾರೆ. ಆದರೆ, ಈ ಬಗ್ಗೆ ಅಧಿಕೃತ ದೂರುಗಳು ದಾಖಲಾಗಿಲ್ಲ. ಸುಲಿಗೆಗೆ ಒಳಗಾಗಿರುವವರು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿ ಹೇಳಿದರು.
* ಮಂಜುನಾಥ್ ಲಘುಮೇನಹಳ್ಳಿ