Advertisement

ಯಕ್ಷಗಾನದ ಆರೋಗ್ಯಕರ ಬೆಳವಣಿಗೆಗೆ ದಿಕ್ಸೂಚಿಯಾದ ಎರಡು ಪ್ರಸಂಗಗಳು

06:36 PM Sep 19, 2019 | mahesh |

ಸನ್ನಿವೇಶಗಳ ಭಾವಾಭಿವ್ಯಕ್ತಿಗೆ ಹೊಂದುವಂತೆ ಶಿವರಂಜನಿ, ರೇವತಿ, ಸಾಮ, ಹಿಂದೋಳ, ಮೋಹನ, ಕಾನಡ, ಮಧ್ಯಮಾವತಿ ಇತ್ಯಾದಿ ರಾಗಗಳ ಹಾಡುಗಾರಿಕೆ ನಾಲ್ಕೂ ಭಾಗವತರಿಂದ ಸಮರ್ಥ ವಾದ್ಯ ಸಹಕಾರದೊಂದಿಗೆ ನಡೆಯಿತು. ತೆಂಕಿನಲ್ಲಿ ಸಾಮಾನ್ಯವಾದ ಭಾಮಿನಿಯಲ್ಲದೆ, ಏಕ, ತ್ರಿವುಡೆ, ರೂಪಕ, ಝಂಪೆ ತಾಳಗಳಲ್ಲಿ ಈ ಪದ್ಯಗಳು ಚೇತೋಹಾರಿಯಾಗಿ ಮೂಡಿಬಂದವು.

Advertisement

ಸಿರಿಬಾಗಿಲು ರಾಮಕೃಷ್ಣ ಮಯ್ಯ ನೇತೃತ್ವದ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಇತ್ತೀಚೆಗೆ ಎರಡು ರಾತ್ರಿ ಪೂರ್ತಿ ತೆಂಕು ಯಕ್ಷಗಾನ ಪ್ರದರ್ಶನಗಳು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದವು. ಎರಡೂ ಅಪೂರ್ವವಾದ ವೈಶಿಷ್ಟ್ಯಪೂರ್ಣ ಪ್ರಸಂಗಗಳು. ಪೃಥ್ವಿರಾಜ್‌ ಕವತ್ತಾರ್‌ ಸಂಯೋಜಿಸಿ, ಗಣೇಶ್‌ ಕೊಲೆಕ್ಕಾಡಿಯವರ ಹಾಗೂ ವಿವಿಧ ಪ್ರಸಂಗಗಳಿಂದ ಆಯ್ದ ಪದ್ಯಗುತ್ಛಗಳಿವು.

ಮೊದಲ ದಿನದ ಆತ್ಮಾನಂ ಮಾನುಷಂ ಮನ್ಯೆ ಎಂಬುದು ಲಂಕೆಯಲ್ಲಿ ರಾವಣನ ವಧೆಯಾದ ಅನಂತರದ ವಿದ್ಯಮಾನಗಳ ಬಗ್ಗೆ ಬೆಳಕು ಚೆಲ್ಲುವ ಕಥಾನಕ. ಕರುಣಾರಸ ಪ್ರಧಾನವಾದ ಈ ಪ್ರಸಂಗದಲ್ಲಿ ಹಿಮ್ಮೇಳ, ಅರ್ಥಗಾರಿಕೆ, ಅಭಿನಯಗಳು ವಿಜೃಂಭಿಸಿ ಯಕ್ಷಗಾನದ ಒಂದು ವಿಭಿನ್ನ ಅನುಭವವನ್ನು ನೀಡಿದವು.

ಎರಡನೆಯ ಪ್ರಸಂಗ ಮಹಾಪ್ರಸ್ಥಾನ. ಕುರುಕ್ಷೇತ್ರ ಮಹಾಯುದ್ಧ ಮುಗಿದ ಹದಿನೆಂಟನೇ ದಿವಸದ ಮುಂದಿನ ಕಥೆ. ಭೀಭತ್ಸ, ಕರುಣ, ರೌದ್ರ, ಹಾಸ್ಯ, ವೀರ, ಶಾಂತ ರಸಗಳು ಪ್ರಸಂಗದುದ್ದಕ್ಕೂ ಅಭಿವ್ಯಕ್ತಗೊಂಡು ಪ್ರದರ್ಶನ ಸಮೃದ್ಧ, ಶ್ರೀಮಂತವಾಯಿತು.

ಎರಡೂ ಪ್ರಸಂಗಗಳಲ್ಲಿ ಸನ್ನಿವೇಶಗಳ ಭಾವಾಭಿವ್ಯಕ್ತಿಗೆ ಹೊಂದುವಂತೆ ಶಿವರಂಜನಿ, ರೇವತಿ, ಸಾಮ, ಹಿಂದೋಳ, ಮೋಹನ, ಕಾನಡ, ಮಧ್ಯಮಾವತಿ ಇತ್ಯಾದಿ ರಾಗಗಳ ಹಾಡುಗಾರಿಕೆ ನಾಲ್ಕೂ ಭಾಗವತರಿಂದ ಸಮರ್ಥ ವಾದ್ಯ ಸಹಕಾರದೊಂದಿಗೆ ನಡೆಯಿತು. ತೆಂಕು ಯಕ್ಷಗಾನದಲ್ಲಿ ಸರ್ವಸಾಮಾನ್ಯವಾದ ಭಾಮಿನಿಯಲ್ಲದೆ, ಏಕ, ತ್ರಿವುಡೆ, ರೂಪಕ, ಝಂಪೆ ತಾಳಗಳಲ್ಲಿ ಈ ಪದ್ಯಗಳು ಚೇತೋಹಾರಿಯಾಗಿ ಮೂಡಿಬಂದವು. ಪುತ್ತಿಗೆ ರಘುರಾಮ ಹೊಳ್ಳ, ರಾಮಕೃಷ್ಣ ಮಯ್ಯರೊಂದಿಗೆ ಉದಯೋನ್ಮುಖ ಚಿನ್ಮಯ ಕಲ್ಲಡ್ಕ ಗಮನ ಸೆಳೆದರು.

Advertisement

ಮುಮ್ಮೇಳದ ಮುಖ್ಯ ಅಂಶಗಳೆಂದರೆ ಸಾಂಪ್ರದಾಯಿಕವಾಗಿದ್ದು, ಪಾತ್ರ ಸ್ವಭಾವಕ್ಕೆ ಹೊಂದುವ ವರ್ಣ ವೈವಿಧ್ಯತೆಯ ವೇಷಭೂಷಣಗಳು ಮತ್ತು ಮುಖವರ್ಣಿಕೆಗಳು; ದಶರಥಪುತ್ರರ, ಪಂಚಪಾಂಡವರ “ಸಭಾಕ್ಲಾಸ್‌’ನೊಂದಿಗಿನ ಪ್ರವೇಶ. ಮುಖ್ಯ ಪಾತ್ರಗಳಲ್ಲಿ ಕೆ. ಗೋವಿಂದ ಭಟ್‌, ಸುಣ್ಣಂಬಳ ವಿಶ್ವೇಶ್ವರ ಭಟ್‌, ಉಬರಡ್ಕ ಉಮೇಶ ಶೆಟ್ಟಿ, ರವಿರಾಜ ಪನೆಯಾಲ, ಅಂಬಾಪ್ರಸಾದ, ಸುಬ್ರಾಯ ಹೊಳ್ಳ, ರಾಧಾಕೃಷ್ಣ ನಾವಡ, ದಿನಕರ ಗೋಖಲೆ, ಗುಂಡಿಮಜಲು ಗೋಪಾಲ ಭಟ್‌, ಶಶಿಕಾಂತ ಶೆಟ್ಟಿ, ಲಕ್ಷ್ಮಣ ಕುಮಾರ್‌ ಮರಕಡ, ಶಂಭಯ್ಯ ಭಟ್‌ ಕಂಜರ್ಪಣೆ, ಗಣೇಶ್‌ ಶೆಟ್ಟಿ, ಜಯರಾಮ ಆಚಾರ್ಯ, ಕೃಷ್ಣ ಮೂಲ್ಯ, ಪವನ್‌ ಕೆರ್ವಾಶೆ ಇವರುಗಳೆಲ್ಲ ಅನ್ಯಾದೃಶ ಪಾತ್ರ ಪ್ರಸ್ತುತಿಯೊಂದಿಗೆ ಯಶಸ್ಸಿನಲ್ಲಿ ಪ್ರಮುಖರಾದರು. ಕೊನೆಯಲ್ಲಿ ಐದು ಕೇಸರಿತ‌ಟ್ಟೆಯ ವೇಷಗಳೊಂದಿಗೆ ರಂಗಸ್ಥಳದ ಮೇಲೆ ಬಂದು ಅಬ್ಬರಿಸಿದವರು ಹರಿನಾರಾಯಣ, ಹರೀಶ ಮಣ್ಣಾಪು, ಗೋಪಾಲಕೃಷ್ಣ ಭಟ್‌ ನಿಡುವಜೆ, ಮಧುರಾಜ್‌ ಮತ್ತು ಸತೀಶ್‌ ನೀರ್ಕೆರೆ.

ಧಾವಂತವಿಲ್ಲದ, ವೈವಿಧ್ಯರಸಭರಿತವಾದ, ಅರ್ಥಗಾರಿಕೆ, ಅಭಿನಯ, ರಂಗನಡೆ, ನೃತ್ಯ ಸಂಯೋಜನೆ ಇತ್ಯಾದಿಗಳಿಗೆ ಬಹಳಷ್ಟು ಅವಕಾಶ, ಪ್ರಾಶಸ್ತ್ಯಗಳಿರುವ ಈ ಎರಡು ಪ್ರದರ್ಶನಗಳು ಒಂದು ಸ್ವಾಗತಾರ್ಹ ಬದಲಾವಣೆಯನ್ನು ಕೊಟ್ಟಿವೆ. ಯಕ್ಷಗಾನ ಯಾವ ನಿಟ್ಟಿನಲ್ಲಿ ಬೆಳೆಯುವುದು ಆರೋಗ್ಯಕರ ಎಂಬ ವಿಚಾರವಾಗಿ ಈ ಪ್ರದರ್ಶನಗಳು ದಿಕ್ಸೂಚಿಯಾಗಿವೆ.

ಉದಯ ಕೃಷ್ಣ ಜಿ.

Advertisement

Udayavani is now on Telegram. Click here to join our channel and stay updated with the latest news.

Next