ನಾಟಕದ ಕೊನೆಯಲ್ಲಿ ಅವನ ಆತ್ಮಚರಿತ್ರೆ ಬರೆಯಲು ಬಂದವಳು ಸ್ವಾರ್ಥಕ್ಕಾಗಿ ಸೋತ ಖಟ್ಲೆಯಲ್ಲಿ ತನ್ನ ಬದುಕನ್ನು ಹಾಳು ಮಾಡಿಕೊಂಡ ಅಮಾಯಕಿಯ ಮಗಳು ಅನ್ನೋ ಸತ್ಯ ಬಯಲಾಗುತ್ತದೆ. ಆಧುನಿಕ ಮನಸ್ಸುಗಳ ನಡುವೆ ದುರಾಭಿಮಾನದ ಲೋಕದಲ್ಲಿ ಸತ್ಯ ಸಗಣಿ, ಹೊಲಸು, ಅಸಹ್ಯ ಅಂದಮೇಲೆ ಪ್ರೀತಿ ಎಲ್ಲಿಂದ ಹುಟ್ಟಬೇಕು ಕಂಡ್ರಿ? ಈ ಪ್ರಶ್ನೆ ಪ್ರಸಕ್ತದಲ್ಲಿ ಎಲ್ಲರನ್ನೂ ಕಾಡುತ್ತದೆ.
ರಂಗ ಸಂಗಾತಿಯ ದಶಮಾನೋತ್ಸವದಂಗವಾಗಿ ಮಂಗಳೂರಿನ ಪುರಭವನದಲ್ಲಿ ಇತ್ತೀಚೆಗೆ ಉಡುಪಿ ರಂಗಭೂಮಿ ತಂಡದಿಂದ ಶಶಿರಾಜ್ ಕಾವೂರ್ ರಚನೆಯ ರವಿರಾಜ್ ನಿರ್ದೇಶನದ ನಾಟಕ “ಐಸಿಯು ನೋಡುವೆ ನಿನ್ನ’ ಮತ್ತು ಸೇತುರಾಮ್ ಅವರ ರಚನೆ ಮತ್ತು ನಿರ್ದೇಶನದ “ಅತೀತ’ ನಾಟಕಗಳು ಪ್ರದರ್ಶನಗೊಂಡವು.
ಯಂತ್ರವನ್ನು ಸೃಷ್ಟಿಸಿದವನು ಮನುಷ್ಯ, ಆದರೆ ಮನುಷ್ಯನೇ ಯಂತ್ರವಾದರೆ ಬದುಕು ದುಸ್ತರವಾಗುತ್ತದೆ ಎನ್ನುವುದನ್ನು ಐಸಿಯು ನೋಡುವೆ ನಿನ್ನ ನಾಟಕದ ಪಾತ್ರಗಳು ಚಿತ್ರಿಸುತ್ತವೆ. ಮನುಷ್ಯ ಭಾವಜೀವಿ ಆದರೆ ಭಾವನೆಗಳೇ ಇಲ್ಲದೆ ಬದುಕಿದರೆ ಹೇಗೆ? ಸಂಬಂಧಗಳ ನಡುವೆ ಪ್ರೀತಿ, ಮಮತೆ, ವಾತ್ಸಲ್ಯ, ಪ್ರೇಮ ಇವುಗಳು ಇಲ್ಲವಾಗಿ ಕೇವಲ ಹಣ, ಆಸ್ತಿ, ಸಂಪತ್ತು ಮುಖ್ಯವಾಗುತ್ತಿದೆ. ಕಥಾ ಹಂದರವು ಆಸ್ಪತ್ರೆಯ ಒಳ ಪ್ರಾಂಗಣದಲ್ಲಿರುವ ಐಸಿಯು ಮುಂಭಾಗದಲ್ಲಿ ನಡೆಯುತ್ತದೆ. ಅಂತರಂಗ ಮತ್ತು ಬಹಿರಂಗಗಳ ಒಳ ಮತ್ತು ಹೊರ ಮನಸ್ಸುಗಳ ಸಂಘರ್ಷವನ್ನು ತೆರೆಯ ಮೇಲೆ ತರುತ್ತದೆ. ಆರು ಮಕ್ಕಳಿಗೆ ಜನ್ಮಕೊಟ್ಟ ಅಪ್ಪ ಆಸ್ಪತ್ರೆ ಪಾಲಾಗಿದ್ದಾನೆ. ಅವನ ವೈದ್ಯಕೀಯ ವೆಚ್ಚ ಸರಿದೂಗಿಸಲು ಮಕ್ಕಳ ಜಗಳ, ಬಡಿದಾಟ ನಾಟಕದೊಳಗೆ ನಾಟಕೀಯ ಸನ್ನಿವೇಶ. ಚುರುಕುತನದ ಪಾತ್ರಗಳು ಲವವಿಕೆಯ ನಟನೆಯಿಂದ ರಂಗದ ಮೇಲೆ ಜೀವ ತುಂಬಿದವು. ಕಿರಿಯ ಮಗ ಮೌನೇಶ, ಗಿರೀಶ್, ರಮೇಶ್, ಸತೀಶ್, ಮಂಗಳಾ, ದಿನೇಶ್, ಆಸ್ಪತ್ರೆ ಅಟೆಂಡರ್, ಡಾಕ್ಟರ್ ನರ್ಸ್, ಗ್ರಾಹಕ ವಿಲ್‌ಫ್ರೆಡ್, ಜಸಿಂತಾ, ಈ ಎಲ್ಲಾ ಪಾತ್ರಗಳು ಕಥೆಯನ್ನು ಮುಂದೆ ಸಾಗಿಸುತ್ತವೆ. ಮನೆಯ ಚಾವಡಿಯೊಳಗೆ ಅಪ್ಪ, ಅಮ್ಮ, ಮಕ್ಕಳ ಬಾಲ್ಯದ ನೆನಪುಗಳನ್ನು ಒಂದೊಂದಾಗಿ ಅನಾವರಣಗೊಳಿಸುತ್ತವೆ. ಮನುಷ್ಯ ಮಾನವೀಯತೆ ಇಲ್ಲದೆ ಕೇವಲ ಅಸ್ಥಿಪಂಜರದ ಬದಕನ್ನು ಸಾಗಿಸುತ್ತಿದ್ದಾನೆ ಎನ್ನುವುದನ್ನು ನಾಟಕ ಮಾರ್ದನಿಸುತ್ತ, ಮನ ಕಲುಕುತ್ತದೆ. ಕಾತ್ಯಾಯಿನಿ ಕುಂಜಿಬೆಟ್ಟು ಮತ್ತು ಗೀತಂ ಗಿರೀಶ್ ಅವರ ಸಂಗೀತದ ಕಣ್ಣಾಮುಚ್ಚಾಲೆ ಹಾಗೂ ಬೆಂಕಿ ಮುಟ್ಟಿಲ್ಲ ರೆಕ್ಕೆ ಸುಟ್ಟಿಲ್ಲ… ಹಾಡು ಮನಕಲಕಿತು.
ಅನಂತರ ನಡೆದ ಅನನ್ಯ ತಂಡ, ಬೆಂಗಳೂರು ಇವರು ಪ್ರಸ್ತುತ ಪಡಿಸಿದ ನಾಟಕ “ಅತೀತ’ ಹೊಸ ಮನ್ವಂತರವನ್ನು ಬರೆಯಿತು. ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿ ಜೀವ ತುಂಬಿದ ಕಲಾವಿದರು, ಪ್ರಸ್ತುತ ಬದುಕಿನ ತಲ್ಲಣ, ಸ್ವ ವಿಮರ್ಶೆ ತಳಮಳ, ವಿಡಂಬನೆ, ಪಾತ್ರಗಳ ಚುರುಕು ಅಭಿನಯ, ಮಾತಿನ ಮೋಡಿ ಉತ್ಕೃಷ್ಟ ಮಟ್ಟದ ಕಥಾ ಹಂದರವೇ “ಅತೀತ’.
ಸಮಾಜದೊಳಗೆ ಮುಖವಾಡಗಳ ಬದುಕು, ಹಾದರ, ಅನೈತಿಕತೆ, ಹೆಸರಿನ ಸೆಳೆತ, ವ್ಯವಸ್ಥೆ ಯೊಳಗಿನ ಮಾನವ ನಿರ್ಮಿತ ಸಂಬಂಧಗಳು ಮುಖವಾಡ ಧರಿಸಿ ಬದುಕುವ ಸಂಘರ್ಷದ ವಾದ-ವಿವಾದಗಳ ಹೂರಣವೇ ಈ ನಾಟಕದ ಕಥಾ ವಸ್ತು.
ಮಂದಬೆಳಕಿನಲ್ಲಿ ಕಾಣಿಸುವ ವ್ಯಕ್ತಿ ನಿವೃತ್ತ ವಕೀಲ, ವಯಸ್ಸು 85. ವೃತ್ತಿ ಬದುಕಿನಿಂದಷ್ಟೇ ಅಲ್ಲ ಈ ಸಮಾಜದ ಬದುಕಿನಿಂದ ಕೂಡ ನಿವೃತ್ತಿ ಹೊಂದಿದ್ದಾನೆ. ಹೆಂಡತಿ ಸತ್ತು 30 ವರ್ಷ ಕಳೆದಿವೆ, ಆ ಬಗ್ಗೆ ಮರುಕವಿಲ್ಲ. ಇರಲು ದೊಡ್ಡ ಅರಮನೆ, ಖರ್ಚಿಗೆ ಸಾಕಷ್ಟು ಹಣ, ಮನುಷ್ಯರ ಸಮಾಜದಿಂದ ಹೊರಬಂದು ಯಂತ್ರಗಳ ಜೊತೆಗೆ ಜೀವನದ ಉಳಿದ ದಿನಗಳನ್ನು, ತನ್ನದೇ ಆದ ನಿಯಮಗಳನ್ನು ನಿರ್ಮಿಸಿಕೊಂಡು ಸಂತೋಷದಿಂದ ಬದುಕು ದೂಡುವ ಕರ್ತವ್ಯ ನಿರ್ಲಕ್ಷದ ವ್ಯಕ್ತಿ. ವಕೀಲ ವೃತ್ತಿಯಲ್ಲಿ ಸಾಧಿಸಿದ ಯಶಸ್ಸಿನ ನೆಪ. ಆತ್ಮಚರಿತ್ರೆಗಾಗಿ ದಾಖಲಿಸುವ ನೆನಪುಗಳಿಗಾಗಿ ಹುಡುಗಿಯ ಪ್ರಶ್ನೆಗಳ ಸುರಿಮಳೆ. ಪ್ರಶ್ನೆಗಳೇ ವಕಾಲತ್ತಿನ ಸಿದ್ಧಹಸ್ತ ಉತ್ತರಗಳು. ಹುಡುಗಿ ಮತ್ತು ನಿವೃತ್ತ ವಕೀಲನ ಮುಖಾಮುಖಿಯ ನಡುವೆ ಕಥೆ ಸಾಗುತ್ತದೆ.
ಕರುಣಾಕರ ಬಳ್ಕೂರು