Advertisement

ಇನ್ನು ತಿಂಗಳಲ್ಲಿ ಎರಡು ಜಿಲ್ಲೆ ಪ್ರವಾಸ: ಎಚ್‌ಡಿಕೆ

10:18 AM Nov 16, 2018 | Team Udayavani |

ಬೀದರ: ಇನ್ನು ಮುಂದೆ ವಿಧಾನ ಸೌಧದಲ್ಲಿ ಹೆಚ್ಚು ಹೊತ್ತು ಕಾಲ ಕಳೆಯುವುದಿಲ್ಲ. ಬದಲಿಗೆ ತಿಂಗಳಲ್ಲಿ ಎರಡು ಜಿಲ್ಲೆಗಳ ಪ್ರವಾಸ ಕೈಗೊಂಡು ಕೃಷಿ ಕ್ಷೇತ್ರದಲ್ಲಿ ಬದಲಾವಣೆಗೆ ಒತ್ತು ನೀಡುತ್ತೇನೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

Advertisement

ನಗರದ ನೆಹರು ಕ್ರೀಡಾಂಗಣದಲ್ಲಿ ಗುರುವಾರ ಸಹಕಾರ ಇಲಾಖೆ ಆಯೋಜಿಸಿದ್ದ 65ನೇ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಕೃಷಿಯಿಂದ ಲಾಭ ಸಾಧ್ಯ ಎಂಬುದನ್ನು ರೈತರಿಗೆ ಮನವರಿಕೆ ಮಾಡಬೇಕಾದ ಹಿನ್ನೆಲೆಯಲ್ಲಿ ಈ ಯೋಜನೆ ಹಾಕಿಕೊಂಡಿದ್ದು, ರಾಜ್ಯದ ರೈತರು ಕೂಡ ಸಹಕಾರ ನೀಡಬೇಕು. ಅಧಿಕಾರಿಗಳ ತಂಡದೊಂದಿಗೆ ಜಿಲ್ಲೆಗಳಿಗೆ ತೆರಳುತ್ತೇನೆ. ರೈತರ ಹೊಲಗಳಿಗೆ ಖುದ್ದಾಗಿ ಭೇಟಿ ನೀಡಿ ಕೃಷಿ ಪದ್ಧತಿ ಬದಲಾವಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
 
ಗರ್ಭಿಣಿಯರಿಗೆ 6 ತಿಂಗಳಿಂದ 12 ತಿಂಗಳುಗಳ ತನಕ ಮಾಸಿಕ 2 ಸಾವಿರ ರೂ. ನೀಡುವ ಯೋಜನೆಗೆ ಚಾಲನೆ ನೀಡಲಾಗಿದೆ. ಚುನಾವಣೆ ಪೂರ್ವದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಗರ್ಭಿಣಿಯರಿಗೆ ತಿಂಗಳಿಗೆ ತಲಾ 6 ಸಾವಿರ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಆರ್ಥಿಕ ಹೊರೆ ಹಿನ್ನೆಲೆಯಲ್ಲಿ ಸದ್ಯ 6 ತಿಂಗಳುಗಳ ತನಕ ತಲಾ 2 ಸಾವಿರ ನೀಡಲು ಉದ್ದೇಶಿಸಲಾಗಿದೆ. ಗರ್ಭಿಣಿಯರ ಆರೋಗ್ಯದ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂದಿನ ವರ್ಷದಿಂದ ಹೆಚ್ಚು ಹಣ ನಿಗದಿ ಮಾಡಲಾಗುವುದು ಎಂದರು.

ಇದೇ ತಿಂಗಳಿನಿಂದ 65 ವರ್ಷ ಮೇಲ್ಪಟ್ಟ ವೃದ್ಧರಿಗೆ ಸದ್ಯ ನೀಡುತ್ತಿರುವ 600 ರೂ.ಯಿಂದ ಒಂದು ಸಾವಿರ ರೂ.ವರೆಗೆ ಪಿಂಚಣಿ ಮೊತ್ತ ಹೆಚ್ಚಿಸಲಾಗಿದೆ. ತಿಂಗಳಿಗೆ 5 ಸಾವಿರ ನೀಡುವ ಭರವಸೆ ನೀಡಲಾಗಿತ್ತಾದರೂ ಆರ್ಥಿಕ ಹೊರೆಯಿಂದಾಗಿ ಸಾಧ್ಯವಾಗಿಲ್ಲ.

ಈ ಯೋಜನೆಗಳು ಸೇರಿದಂತೆ ಹೊಸ ಹೊಸ ಯೋಜನೆಗಳು ಜಾರಿಗೊಳ್ಳುತ್ತಿರುವುದರಿಂದ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next