Advertisement

ಚಾಮರಾಜನಗರ: ಕೋವಿಡ್ 19 ಸೋಂಕಿಗೆ ಒಂದೇ ದಿನ 2 ಸಾವು ; 1 ಸಾವಿನ ಲೆಕ್ಕ ನೀಡಿದ ಜಿಲ್ಲಾಡಳಿತ!

08:51 PM Aug 02, 2020 | Hari Prasad |

ಚಾಮರಾಜನಗರ: ಜಿಲ್ಲೆಯಲ್ಲಿ ಇಂದು ಕೋವಿಡ್ 19 ಸೋಂಕಿನಿಂದ ಇಬ್ಬರು ಮೃತಪಟ್ಟಿದ್ದಾರೆ.

Advertisement

ಆದರೆ, ಜಿಲ್ಲಾಡಳಿತ ನೀಡಿರುವ ಕೋವಿಡ್ 19 ಪತ್ರಿಕಾ ಪ್ರಕಟಣೆಯಲ್ಲಿ ಓರ್ವರು ಮಾತ್ರ ಮೃತಪಟ್ಟಿದ್ದಾರೆಂದು ಮಾಹಿತಿಯನ್ನು ನೀಡಲಾಗಿದೆ.

ಅಲ್ಲದೇ ಶನಿವಾರ ಯಳಂದೂರಿನಲ್ಲಿ ಪಾಸಿಟಿವ್ ಆಗಿ ಮೃತಪಟ್ಟ ಪ್ರಕರಣದ ಮಾಹಿತಿಯನ್ನೂ ಸಹ ಹೆಲ್ತ್ ಬುಲೆಟಿನ್ ನಲ್ಲಿ ಉಲ್ಲೇಖಿಸಿಲ್ಲ.

ಕೊಳ್ಳೇಗಾಲ ಪಟ್ಟಣದ 58 ವರ್ಷದ ಮಹಿಳೆ ಇಂದು ಕೋವಿಡ್‌ 19 ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಅಲ್ಲದೇ ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದ 55 ವರ್ಷದ ಮಹಿಳೆ ಶನಿವಾರ ಕೋವಿಡ್ 19 ಆಸ್ಪತ್ರೆಗೆ ದಾಖಲಾಗಿ ಇಂದು ಮೃತಪಟ್ಟಿದ್ದಾರೆ.

ಜಿಲ್ಲಾಡಳಿತ ಮಾಧ್ಯಮಗಳಿಗೆ ನೀಡುವ ಮಾಹಿತಿಯಲ್ಲಿ ಇಂದಿನ ಸಾವಿನ ಪ್ರಕರಣವನ್ನು 1 ಎಂದು ನಮೂದಿಸಲಾಗಿದೆ. ಅಲ್ಲದೇ ಷರಾದಲ್ಲಿ ನೀಡುವ ವಿವರಣೆಯಲ್ಲಿ ಗುಂಬಳ್ಳಿ ಮಹಿಳೆಯ ಸಾವಿನ ಬಗ್ಗೆ ಮಾತ್ರ ವಿವರಣೆ ನೀಡಲಾಗಿದೆ. ಆ ಮಹಿಳೆಯ ಶವ ಸಂಸ್ಕಾರವನ್ನು ನಗರದ ಎಡಬೆಟ್ಟದ ತಪ್ಪಲಿನಲ್ಲಿ ಸರ್ಕಾರದ ಕೋವಿಡ್ ಶಿಷ್ಟಾಚಾರದಂತೆ ಬಿಜೆಪಿ ಕಾರ್ಯಕರ್ತರು ನಡೆಸಿದರು.

Advertisement

ಕೊಳ್ಳೇಗಾಲ ಪಟ್ಟಣದ ಮಹಿಳೆಯ ಸಾವಿನ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ ಆ ಮಹಿಳೆಯ ಶವ ಸಂಸ್ಕಾರವನ್ನು ಪಿಎಫ್‌ಐ ಕಾರ್ಯಕರ್ತರು ನಗರದ ಮುಸ್ಲಿಂ ಸ್ಮಶಾನದಲ್ಲಿ ಇಂದು ಬೆಳಿಗ್ಗೆ 11.30ರಲ್ಲಿ ನಡೆಸಿದ್ದಾರೆ.

ಇದಲ್ಲದೇ ಶನಿವಾರ ಯಳಂದೂರಿನಲ್ಲಿ ಸಂಭವಿಸಿದ ಸಾವಿನ ಪ್ರಕರಣವನ್ನೂ ಇಂದು ನಮೂದಿಸಿಲ್ಲ. ಯಳಂದೂರು ಪ್ರಕರಣದಲ್ಲಿ, ಕೋವಿಡ್ 19 ಪಾಸಿಟಿವ್ ಇದ್ದರೂ, ಇನ್ನಿತರ ಕಾಯಿಲೆಗಳ ಕಾರಣದಿಂದ ಮೃತಪಟ್ಟಿದ್ದ 70 ವರ್ಷದ ವ್ಯಕ್ತಿಯ ವಿವರವನ್ನು ಸಹ ಇಂದಿನ ಪ್ರಕಟಣೆಯಲ್ಲಿ ಪ್ರಸ್ತಾಪಿಸಿಲ್ಲ. ಕೋವಿಡೇತರ ಸಾವಿನ ಪ್ರಕರಣ ವಿಭಾಗದಲ್ಲಿಯೂ ಯಳಂದೂರು ಸಾವಿನ ಪ್ರಕರಣವನ್ನು ಸೇರಿಸಿಲ್ಲ.

ಇಂದಿನ ಇಬ್ಬರ ಸಾವಿನ ಪ್ರಕರಣವೂ ಸೇರಿದಂತೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 10ಕ್ಕೇರಿದೆ. ಕೋವಿಡೇತರ ಕಾರಣದಿಂದ ಮೃತಪಟ್ಟವರ ಸಂಖ್ಯೆ 2ಕ್ಕೇರಿದೆ.

ಜಿಲ್ಲೆಯಲ್ಲಿ ಇಂದು 37 ಮಂದಿಗೆ ಸೋಂಕು: 33 ಮಂದಿ ಗುಣಮುಖ
ಜಿಲ್ಲೆಯಲ್ಲಿ ಇಂದು 37 ಕೋವಿಡ್ 19 ಸೊಂಕು ಪ್ರಕರಣಗಳು ಪತ್ತೆಯಾಗಿವೆ. 33 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯ ಒಟ್ಟು ಪ್ರಕರಣಗಳ ಸಂಖ್ಯೆ 745 ಕ್ಕೇರಿದ್ದು, 496 ಸೋಂಕಿತರು ಗುಣಮುಖರಾಗಿದ್ದಾರೆ. 239 ಸಕ್ರಿಯ ಪ್ರಕರಣಗಳಿವೆ. ಎಂಟು ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು 486 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ವರದಿಯಾಗಿರುವ 37 ಪ್ರಕರಣಗಳಲ್ಲಿ ಒಬ್ಬರಿಗೆ ಸೋಂಕು ಇರುವುದು ಮೈಸೂರಿನಲ್ಲಿ ದೃಢಪಟ್ಟಿದೆ. ಚಾಮರಾಜನಗರ ತಾಲೂಕಿನಲ್ಲಿ 15 ಪ್ರಕರಣಗಳು ವರದಿಯಾಗಿವೆ. ಗುಂಡ್ಲುಪೇಟೆ ತಾಲೂಕಿನಲ್ಲಿ 9, ಕೊಳ್ಳೇಗಾಲ ತಾಲೂಕಿನಲ್ಲಿ 8, ಹನೂರು ತಾಲೂಕಿನಲ್ಲಿ 3 ಹಾಗೂ ಯಳಂದೂರು ತಾಲೂಕಿನಲ್ಲಿ 2 ಪ್ರಕರಣಗಳು ವರದಿಯಾಗಿವೆ.

ಗುಣಮುಖರಾಗಿರುವ 33 ಮಂದಿಯಲ್ಲಿ ಚಾಮರಾಜನಗರ 11ಹಾಗೂ ಕೊಳ್ಳೇಗಾಲ ತಾಲೂಕಿನ 11, ಗುಂಡ್ಲುಪೇಟೆ ತಾಲೂಕಿನ 6, ಹನೂರು ತಾಲೂಕಿನ 3, ಯಳಂದೂರು ತಾಲೂಕಿನ 1 ಹಾಗೂ ಹೊರ ಜಿಲ್ಲೆಯ 1 ಪ್ರಕರಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next