ಬೆಂಗಳೂರು : ಭಾನುವಾರ ಮುಂಬೈನಲ್ಲಿ ನಿಧನ ಹೊಂದಿದ ಭಾರತ ರತ್ನ ಪ್ರಶಸ್ತಿ ಪುರಸ್ಕೃತೆ ಗಾಯಕಿ ಲತಾ ಮಂಗೇಶ್ಕರ್ ಅವರ ಗೌರವಾರ್ಥ ಕರ್ನಾಟಕ ಸರಕಾರ ಎರಡು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ.ಅವರ ನಿಧನಕ್ಕೆ ಸರಕಾರ ತೀವ್ರ ದುಃಖವನ್ನು ವ್ಯಕ್ತಪಡಿಸುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
” ಅಗಲಿದ ಆತ್ಮದ ಗೌರವಾರ್ಥವಾಗಿ ಫೆಬ್ರವರಿ 6 ಮತ್ತು 7 ರಂದು ರಾಜ್ಯಾದ್ಯಂತ ಶೋಕಾಚರಣೆ ನಡೆಯಲಿದೆ. ಈ ಅವಧಿಯಲ್ಲಿ ಯಾವುದೇ ಅಧಿಕೃತ, ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ಭಾರತದ ತ್ರಿವರ್ಣ ಧ್ವಜ ಅರ್ಧಕ್ಕೆ ಹಾರಲಿದೆ,” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಲತಾ ಮಂಗೇಶ್ಕರ್ ಅವರು 92 ನೇ ವಯಸ್ಸಿನಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿದ್ದಕ್ಕಾಗಿ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದ ದಾಖಲಾಗಿ 28 ದಿನಗಳ ನಂತರ ಅವರು ಇಹಲೋಕ ತ್ಯಜಿಸಿದ್ದಾರೆ.
ಲತಾ ಮಂಗೇಶ್ಕರ್ ಪ್ರತಿಯೊಬ್ಬರ ಮನದಲ್ಲಿ ಚಿರಸ್ಥಾಯಿ
ಈ ಜಗತ್ತಿನಲ್ಲಿ ಎಲ್ಲಿಯತನಕ ಸಂಗೀತ ಇರುತ್ತದೆಯೋ, ಎಲ್ಲಿಯವರೆಗೂ ಹಾಡುಗಾರಿಕೆ ಇರುತ್ತದೆಯೋ, ಅಲ್ಲಿಯವರೆಗೂ ಗಾನ ವಿದುಷಿ ಲತಾ ಮಂಗೇಶ್ಕರ್ ಅವರು ಪ್ರತಿಯೊಬ್ಬರ ಮನದಲ್ಲಿಯೂ ಚಿರಸ್ಥಾಯಿಯಾಗಿ ಉಳಿಯಲಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ. ಓಂ ಶಾಂತಿಃ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.