ಬೆಂಗಳೂರು: ಮಕ್ಕಳಲ್ಲಿ ಕಂಡುಬರುವ ಆಟಿಸಂ ರೋಗದ ಕುರಿತು ಪಾಲಕ, ಪೋಷಕರಲ್ಲಿ ಜಾಗೃತಿ ಮೂಡಿಸಿಸಲು ಬಿಎಂಐ ಫೌಂಡೇಶನ್ ಮಾ.3 ಮತ್ತು 4ರಂದು ನಗರದ ತಾಜ್ ವಿವಂತಾ ಹೋಟೆಲ್‌ನಲ್ಲಿ ಅಂತಾರಾಷ್ಟ್ರೀಯ ಆಟಿಸಂ ಸಮಾವೇಶ ಹಮ್ಮಿಕೊಂಡಿದೆ.
“ಆಟಿಸಂ ಭೇದಿಸುವುದು ಮತ್ತು ಪರಿಹಾರ ಕಂಡುಕೊಳ್ಳುವುದು’ ಎಂಬ ಕಲ್ಪನೆಯಡಿ ಸಮಾವೇಶ ನಡೆಯಲಿದೆ. ದೇಶ, ವಿದೇಶದ ಪ್ರತಿಷ್ಠತ ವೈದ್ಯರು, ಮನಃಶಾಸ್ತ್ರಜ್ಞರು, ಮಕ್ಕಳ ತಜ್ಞರು, ನರ ವಿಜ್ಞಾನಿಗಳು, ಸಮಾಲೋಚಕರು ಮತ್ತು ಆಟಿಸಂ ಸಮಸ್ಯೆಗೆ ತುತ್ತಾದ ಮಕ್ಕಳ ಪಾಲಕರು, ಸರ್ಕಾರಿ ವೈದ್ಯರು ಭಾಗವಹಿಸಲಿದ್ದಾರೆ.
ನಿಮ್ಹಾನ್ಸ್‌ನ ನಿವೃತ್ತ ಪ್ರಾಧ್ಯಾಪಕಿ ಡಾ.ಶೋಭಾ ಶ್ರೀನಾಥ್ ಅವರು ಸಮಾವೇಶ ಉದ್ಘಾಟಿಸಲಿದ್ದಾರೆ. ಮಕ್ಕಳ ನರವಿಜ್ಞಾನಿಗಳಾದ ಡಾ.ವೃಜೇಶ್ ಉದಾನಿ, ಡಾ.ಲೋಗೇಶ್ ಲಿಂಗಪ್ಪ, ಮಕ್ಕಳ ವೈದ್ಯರಾದ ಡಾ.ರಾಜೇಶ್ವರಿ ಗಣೇಶ್, ಡಾ.ಹಿಮಾನಿ ಖನ್ನಾ, ಡಾ.ಪೂಜಾ ಕಪೂರ್, ಆಟಿಸಂ ತಜ್ಞರಾದ ಸ್ಮಿತಾ ಅಶ್ವಥಿ, ಡಾ.ರೋಬರ್ಟ್ ರೋಸ್, ಡಾ.ನಿಯಿಲ್ ಮಾರ್ಟಿನ್, ಡಾ.ಜನೆಟ್ ಟ್ವಾಯ್ಮನ್, ವಿವಿಧ ಜಿಲ್ಲೆಗಳ ಸರ್ಕಾರಿ ವೈದ್ಯಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಬಿಎಂಐ ಫೌಂಡೇಶನ್‌ನ ಸುಷ್ಮಾ ವಶಿಷ್ಠ ತಿಳಿಸಿದರು.
ಆಟಿಸಂ ಡಯಾಗ್ನಿಸ್ ಮಾಡುವಾಗ ಎದುರಿಸುವ ಸವಾಲಿನ ಬಗ್ಗೆ ಮನೋವೈದ್ಯೆ ಡಾ.ಪದ್ಮಾ ಪಲ್ಲವಿಯವರು ವಿಷಯ ಮಂಡನೆ ಮಾಡಲಿದ್ದಾರೆ. ಮಕ್ಕಳ ತಜ್ಞೆ ಡಾ.ರಾಜೇಶ್ವರಿ ಗಣೇಶ್ ಅವರು ಆಟಿಸಂ ಚಿಕಿತ್ಸೆ ಎಷ್ಟು ಸಮಯ ಎಂಬುದರ ಬಗ್ಗೆ ವಿವರ ನೀಡಲಿದ್ದಾರೆ. ನಿದ್ರಿಸುವಾಗ ಎದುರಾಗುವ ಸಮಸ್ಯೆಯನ್ನು ವೈದ್ಯಕೀಯವಾಗಿ ನಿರ್ವಹಣೆ ಮಾಡುವುದು ಹೇಗೆ ಎಂಬುದರ ಬಗ್ಗೆ ಡಾ.ರಶ್ಮಿ ಅಡಿಗ ಅವರು ಮಾಹಿತಿ ನೀಡಲಿದ್ದಾರೆ. ಆಟಿಸಂ ಜಾಗೃತಿಯ ಬಗ್ಗೆ ವಿಷಯ ತಜ್ಞರು ಜಾಗೃತಿ ಮೂಡಿಸಲಿದ್ದಾರೆ. ಡಿಡಿಡಿ.ಚಿಞಜಿ www.bmi-foundation.org ನಲ್ಲಿ ಸಮಾವೇಶದ ಮಾಹಿತಿ ಲಭ್ಯವಿದೆ.
ಆಟಿಸಂ ಲಕ್ಷಣಗಳು: ಮಕ್ಕಳ ಬೆಳವಣಿಗೆ ಕುಂಠಿತವಾಗುವುದು, ವಯಸ್ಸಿಗೆ ತಕ್ಕಂತೆ ಮಾತು ಮತ್ತು ಸಂಭಾಷಣೆ ಕೌಶಲ್ಯ ಇಲ್ಲದಿರುವುದು, ಸಾಮಾಜಿಕವಾಗಿ ಬೆರೆಯದಿರುವುಕೆ, ಏಕಾಏಕಿ ಸಿಡಿಮಿಡಿಗೊಳ್ಳುವುದು, ಒಂದೇ ವಿಷಯಕ್ಕೆ ನಿರಂತರ ಹಠ ಮಾಡುವುದು ಆಟಿಸಂ ರೋಗದ ಪ್ರಮುಖ ಲಕ್ಷಣಗಳಾಗಿವೆ. ಇದು ನರಕ್ಕೆ ಸಂಬಂಧಿಸಿದ ಸಮಸ್ಯೆಯಾಗಿದ್ದು, ಆಟಿಸಂಗೆ ತುತ್ತಾದ ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಬಹುದು. ಆದರೆ, ಪರಿಪೂರ್ಣವಾಗಿ ಅದರಿಂದ ಮುಕ್ತಿ ಪಡೆಯವುದು ಕಷ್ಟಸಾಧ್ಯ ಎಂದು ಬಿಎಂಐ ಫೌಂಡೇಶನ್‌ನ ಸುಷ್ಮಾ ವಶಿಷ್ಠ ಅವರು ಮಾಹಿತಿ ನೀಡಿದರು.