ಯಾದಗಿರಿ: ಜಿಲ್ಲೆಯ ಸುರಪುರ ನಗರಕ್ಕೆ ಕಳೆದೆರಡು ದಿನಗಳ ಹಿಂದೆ ಗುಜರಾತ್ ರಾಜ್ಯದ ಅಹಮದಾಬಾದನಿಂದ ಆಗಮಿಸಿದ ದಂಪತಿಗಳಲ್ಲಿ ಕೋವಿಡ್-19 ಸೋಂಕು ದೃಢ ಪಟ್ಟಿದೆ.
ಸೋಂಕಿತ 33 ವರ್ಷದ ಮಹಿಳೆ P- 867, 38 ವರ್ಷದ ಪುರುಷ P- 868 ಈಗಾಗಲೇ ಅಹಮದಾಬಾದನಿಂದ ಸುರಪುರನಲ್ಲಿ ಮದುವೆಯಲ್ಲಿ ಭಾಗವಹಿಸಲು ಬಂದಿದ್ದರು ಎನ್ನಲಾಗಿದೆ.
ಜಿಲ್ಲೆಯಿಂದ ಮಾರ್ಚ್ ನಲ್ಲಿ ಅಹಮದಾಬಾದ್ ಗೆ ತೆರಳಿದ್ದ 3 ಜನ ಮೇ. 9 ರಂದು ಲಾರಿಯ ಮೂಲಕ ಬಾಗಲಕೋಟೆಯ ಹುನಗುಂದ ಹೆದ್ದಾರಿಯಲ್ಲಿ ಇಳಿದು, ಅಲ್ಲಿಂದ ಖಾಸಗಿ ವಾಹನದ ಮೂಲಕ ಸುರಪುರಕ್ಕೆ ಆಗಮಿಸಿ ನೇರವಾಗಿ ಜ್ವರ ತಪಾಸಣೆ ಮಾಡಿ ಚಾಲಕ ಸೇರಿ 4 ಜನರನ್ನು ಕ್ವಾರಂಟೈನ್ ನಲ್ಲಿಟ್ಟು ಗಂಟಲು ದ್ರವ ಸಂಗ್ರಹಿಸಲಾಗಿತ್ತು, ಇವರಲ್ಲಿ ಇಬ್ಬರ ವರದಿ ನೆಗೆಟಿವ್ ಬಂದಿದ್ದು ಇಬ್ಬರಿಗೆ ಸೋಂಕು ಇರುವುದು ದೃಢಪಟ್ಟಿದೆ.
ಇದೀಗ ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ದಲ್ಲಿದ್ದವರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಅಧಿಕಾರಿಗಳು ತೊಡಗಿದ್ದಾರೆ.
ಹಸಿರು ಪಟ್ಟಿಯಲ್ಲಿದ್ದ ಯಾದಗಿರಿ ಜಿಲ್ಲೆಗೆ ಮಹಾರಾಷ್ಟ್ರ, ಬೆಂಗಳೂರಿನಿಂದ ಕಾರ್ಮಿಕರು ಆಗಮಿಸಿದ್ದು ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಮಹಾರಾಷ್ಟ್ರದಲ್ಲಿ ಸೋಂಕು ಉಲ್ಭಣಗೊಂಡಿದ್ದು ಅಲ್ಲಿಂದ ಜಿಲ್ಲೆಗೆ ಮರಳುವವರ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಲಾಗುತ್ತಿದ್ದು ಕಡ್ಡಾಯವಾಗಿ 14 ದಿನ ಕ್ವಾರಂಟೈನ್ ಮಾಡಲಾಗುತ್ತಿದೆ.
ಸೋಮವಾರ ತಡರಾತ್ರಿ ಪ್ರಕರಣ ದೃಢವಾಗುತ್ತಿದ್ದಂತೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ ಜಿಲ್ಲಾದ್ಯಾಂತ ಲಾಕ್ ಡೌನ್ ನಿಯಮವನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ.
ಮಂಗಳವಾರ ಬೆಳಿಗ್ಗೆಯಿಂದಲೇ ಜಿಲ್ಲೆಯಲ್ಲಿ ಪೊಲೀಸ್ ಬಿಗಿ ಭದ್ರತೆ ಹೆಚ್ಚಿಸಿ ಅನಗತ್ಯ ವಾಹನ ಒಡಾಟಕ್ಕೆ ಬ್ರೇಕ್ ಹಾಕಿ, ಎಲ್ಲಾ ಅಂಗಡಿ ಮುಂಗಟ್ಟು ಮುಚ್ಚಿಸಲಾಗಿದೆ