Advertisement

ಕೋವಿಡ್ 19 ಸೋಂಕಿತರಲ್ಲಿ ಇಬ್ಬರು ಇಂದು ಡಿಸ್ಚಾರ್ಜ್: ಆರೋಗ್ಯ ಸಚಿವ ರಾಮುಲು

10:01 AM Mar 21, 2020 | keerthan |

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದುವರೆಗೆ 86,231 ಜನರ ತಪಾಸಣೆ ಮಾಡಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ 30,606 ಜನರ ತಪಾಸಣೆ ಮಾಡಲಾಗಿದೆ. ಕಾರವಾರ ಹಾಗೂ ಮಂಗಳೂರು ಬಂದರುಗಳಲ್ಲಿ 5,695 ಜನ ತಪಾಸಣೆ ನಡೆಸಲಾಗಿದೆ. ಕರ್ನಾಟಕದಲ್ಲಿ ಈಗ ಒಟ್ಟು 15 ಮಂದಿ ಕೊರೋನಾ ಸೋಂಕಿತರು ಇದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಮಾಹಿತಿ ನೀಡಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ 13 ಜನ, ಕಲಬುರ್ಗಿಯಲ್ಲಿ 3 ಜನರಿಗೆ ಸೋಂಕು ತಗುಲಿದೆ. ಅದರಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಮಡಿಕೇರಿಯಲ್ಲಿ ಒಬ್ಬರಿಗೆ ಸೋಂಕು ತಾಗಿದೆ. ಇತ್ತೀಚೆಗೆ ಆಸ್ಪತ್ರೆಗೆ ದಾಖಲಾದ ಒಟ್ಟು 5 ಪಾಸಿಟಿವ್ ಬಂದ ರೋಗಿಗಳು ಗುಣಮುಖರಾಗುತ್ತಿದ್ದಾರೆ.  ಇಬ್ಬರು ಇವತ್ತು‌ ಡಿಸ್ಚಾರ್ಜ್ ಆಗ್ತಾ ಇದ್ದಾರೆ ಎಂದರು.

ಒಟ್ಟು ಇಲ್ಲಿಯ ವರೆಗೆ 1143 ಜನರ ರಕ್ತ ಹಾಗೂ ಕಫ ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 915 ಜನರ ವರದಿ ಬಂದಿದ್ದು ಎಲ್ಲವೂ ನೆಗೆಟಿವ್ ಬಂದಿದೆ. ಉಳಿದ ಪರೀಕ್ಷಾ ವರದಿಗಳು ಬರಬೇಕಿದೆ. ಸುಮಾರು‌ 2280 ಜನರನ್ನು ಹೋಮ್ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಸುಮಾರು 97 ಜನರನ್ನ ಹಾಸ್ಪಿಟಲ್ ಕ್ವಾರಂಟೈನ್ ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಕೊರೋನಾ ಭಯಾನಕ ಖಾಯಿಲೆ ಅಲ್ಲ. ಯಾರೂ ಗಾಬರಿ ಪಡುವುದು ಬೇಡ. ನಿನ್ನೆ ಒಂದೇ ದಿನ 3000 ಜನ ಮತ್ತೆ ತಾವಾಗಿಯೇ ಬಂದು ಪರೀಕ್ಷೆ ಮಾಡಿಸಿಕೊಂಡು ಹೋಗಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 22 ರಂದು ಜನತಾ ಕರ್ಫ್ಯೂ ಗೆ ಕರೆ ನೀಡಿದ್ದಾರೆ. ಅಂದು ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಯಾರೂ ಹೊರಗೆ ಬಾರದ ರೀತಿಯಲ್ಲಿ ಪ್ರಧಾನಿ ಸೂಚನೆ ನೀಡಿದ್ದಾರೆ.  ಪ್ರಧಾನಿ ಕರೆಗೆ ನಾವೆಲ್ಲ ಒಟ್ಟುಗೂಡಿ ಕೈ ಜೋಡಿಸಿ ಸ್ಪಂದಿಸೋಣ. ಈಗಾಗಲೇ 15 ದಿನ ನಮ್ಮ‌ ರಾಜ್ಯ ಸರ್ಕಾರ ಮಾಲ್, ಸಿನಿಮಾ ಮಂದಿರ, ಸಾರ್ವಜನಿಕ ಸ್ಥಳಗಳನ್ನ ನಿರ್ಬಂಧಿಸಲಾಗಿದೆ.  ಸರ್ಕಾರದ ನಿಯಮಗಳನ್ನ ರಾಜ್ಯದ ಜನ ಪಾಲಿಸಬೇಕು. ಜನತೆಯ ಸಹಕಾರ ಇಲ್ಲದೆ ಸರ್ಕಾರ ಏನೂ ಮಾಡೋಕೆ ಆಗೊಲ್ಲ. ರಾಜ್ಯದ ಜನ ಆತಂಕಪಡುವ ಅಗತ್ಯವಿಲ್ಲ, ನಿಮ್ಮ ಜೊತೆಗೆ ನಾನಿದ್ದೇನೆ. ನಮ್ಮ ಸರ್ಕಾರ,‌ ಮುಖ್ಯಮಂತ್ರಿಗಳು‌ ಇದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next