Advertisement

ಇಬ್ಬರು ಮುಖ್ಯ ಪೇದೆಗಳ ಅಮಾನತು

06:36 AM Mar 17, 2019 | Team Udayavani |

ಬೆಂಗಳೂರು: ನಗರ ಪೊಲೀಸ್‌ ಆಯುಕ್ತರ ಕಚೇರಿ ಆವರಣದಲ್ಲಿರುವ “ಪೊಲೀಸ್‌ ಪರಿಶೀಲನಾ ಪ್ರಮಾಣ ಪತ್ರ’ ವಿಭಾಗದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರು ಮುಖ್ಯಪೇದೆಗಳನ್ನು ಅಮಾನತು ಮಾಡಲಾಗಿದೆ.

Advertisement

ನಗರ ಗುಪ್ತಚರ ವಿಭಾಗದ ಡಿಸಿಪಿ ಕಚೇರಿಯಲ್ಲಿ ಕಂಪ್ಯೂಟರ್‌ ಆಪರೇಟರ್‌ ಆಗಿರುವ ನಾರಾಯಣಸ್ವಾಮಿ ಮತ್ತು ಪೊಲೀಸ್‌ ಪರಿಶೀಲನಾ ವಿಭಾಗದಲ್ಲಿ ಪ್ರಮಾಣಪತ್ರ ವಿತರಣೆ ಮಾಡುವ ಮಂಜುನಾಥ ಅಮಾನತುಗೊಂಡ ಮುಖ್ಯಪೇದೆಗಳು.

ಇಬ್ಬರೂ ಸುಮಾರು 163 ನಕಲಿ ಪ್ರಮಾಣ ಪತ್ರಗಳನ್ನು ಅಕ್ರಮವಾಗಿ ವಿತರಣೆ ಮಾಡಿದ್ದು, ಅಂದಾಜು 80 ಸಾವಿರ ರೂ. ವಂಚನೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ತನಿಖೆ ಮುಂದುವರಿದಿದೆ ಎಂದು ನಗರ ಪೊಲೀಸ್‌ ಆಯುಕ್ತರ ಕಚೇರಿ ಮೂಲಗಳು ತಿಳಿಸಿವೆ.

ನಗರ ಗುಪ್ತಚರ ವಿಭಾಗದ ಅಧೀನದಲ್ಲಿ ಪೊಲೀಸ್‌ ಪರಿಶೀಲನಾ ಕೇಂದ್ರ ಕಾರ್ಯ ನಿರ್ವಹಿಸುತ್ತದೆ. ಸಾಮಾನ್ಯವಾಗಿ ಈ ಕೇಂದ್ರದಲ್ಲಿ ನಗರದ ಖಾಸಗಿ ವಾಹನ ಚಾಲಕರು, ಉದ್ಯೋಗಾಂಕ್ಷಿಗಳು, ಭದ್ರತಾ ಸಿಬ್ಬಂದಿ, ಪಾಸ್‌ಪೋರ್ಟ್‌ ಅರ್ಜಿದಾರರು ಹಾಗೂ ಇತರೆ ವರ್ಗದ ಸಾರ್ವಜನಿಕರು ಕೆಲ ಉದ್ದೇಶಿತ ಕಾರಣಗಳಿಗಾಗಿ “ಪೊಲೀಸ್‌ ಪರಿಶೀಲನಾ ಪ್ರಮಾಣ ಪತ್ರ’ ಪಡೆಯಲು ಅರ್ಜಿ ಸಲ್ಲಿಸುತ್ತಾರೆ.

ಪ್ರತಿ ಅರ್ಜಿಯೊಂದಿಗೆ ಪರಿಶೀಲನಾ ಶುಲ್ಕ 450 ರೂ. ಪಾವತಿಸಿದ ಚಲನ್‌ ಕೊಡ ಲಗತ್ತಿಸಬೇಕು. ಒಂದು ವೇಳೆ ಅರ್ಜಿದಾರನ ವಿರುದ್ಧ ಆರೋಪಗಳು ಕಂಡು ಬಂದರೆ, ಪ್ರಮಾಣ ಪತ್ರ ವಿತರಣೆ ಮಾಡುವುದಿಲ್ಲ. ಆದರೆ, ನಾರಾಯಣಸ್ವಾಮಿ ಮತ್ತು ಮಂಜುನಾಥ ಯಾವುದೇ ಅರ್ಜಿ ಸ್ವೀಕರಿಸಿದೆ, 163 ಮಂದಿಗೆ ನಕಲಿ ಪ್ರಮಾಣ ಪತ್ರ ವಿತರಿಸಿದ್ದಾರೆ.

Advertisement

ಮುಖ್ಯಪೇದೆ ನಾರಾಯಣಸ್ವಾಮಿ ತನ್ನ ಕಂಪ್ಯೂಟರ್‌ನಲ್ಲಿ ಪ್ರಮಾಣ ಪತ್ರದ ಮಾದರಿಯನ್ನು ಸಂಗ್ರಹಿಸಿಕೊಂಡು, ನಕಲಿ ಪ್ರಮಾಣ ಪತ್ರ ಸೃಷ್ಟಿಸುತ್ತಿದ್ದ. ಬಳಿಕ ಮಂಜುನಾಥ್‌ ಹಣ ಪಡೆದು ಅಗತ್ಯವಿದ್ದವರಿಗೆ ಅದನ್ನು ನೀಡುತ್ತಿದ್ದ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಅಕ್ರಮ ಪತ್ತೆಯಾದದ್ದು ಹೇಗೆ?: ಸಾರ್ವಜನಿಕರಿಗೆ ವಿತರಿಸುವ ಪ್ರತಿ ಪೊಲೀಸ್‌ ಪರಿಶೀಲನಾ ಪ್ರಮಾಣ ಪತ್ರದಲ್ಲಿ “ಹಾಲೋಗ್ರಾಂ’ ಅಂಟಿಸಲಾಗುತ್ತದೆ. ಆದರೆ, ಇತ್ತೀಚೆಗೆ ನಡೆದ ಲೆಕ್ಕ ಪರಿಶೀಲನೆ ವೇಳೆ ಅರ್ಜಿಗಳು ಹಾಗೂ ವಿತರಿಸಿದ ಹಾಲೋಗ್ರಾಂಗಳ ಸಂಖೆಯಲ್ಲಿ ಸಾಕಷ್ಟು ವ್ಯತ್ಯಾಸ ಕಂಡು ಬಂದಿತ್ತು.

ಅನುಮಾನಗೊಂಡ ಅಧಿಕಾರಿಗಳು ಆಂತರಿಕ ತನಿಖೆ ನಡೆಸಿದಾಗ ಇಬ್ಬರ ಕೃತ್ಯ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ಕುಮಾರ್‌ ಸೂಚನೆ ಮೇರೆಗೆ ಪೇದೆಗಳನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ನಕಲಿ ಪ್ರಮಾಣ ಪತ್ರ ಪಡೆದ ವ್ಯಕ್ತಿಗಳ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next