ಬೆಂಗಳೂರು: ಬುಲೆಟ್‌ನ ಕಾಟ್ರೇಜ್(ಕೋಕಾ)ವನ್ನು ಜಜ್ಜಿ ಪುಡಿ ಮಾಡುವ ವೇಳೆ ಬುಲೆಟ್ ಸಿಡಿದು ಇಬ್ಬರು ಕೆಎಸ್‌ಆರ್‌ಪಿ ಕಾನ್‌ಸ್ಟೇಬಲ್‌ಗಳು ಗಾಯಗೊಂಡಿರುವ ಘಟನೆ ಕೆಎಸ್‌ಆರ್‌ಪಿಯ 9ನೇ ಬೆಟಾಲಿಯನ್ ಆವರಣದಲ್ಲಿ ಸೋಮವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಚಂದ್ರಶೇಖರ್ ಮತ್ತು ರಾಮನಿಂಗ ಎಂಬವರ ಕೈ, ಕಾಲುಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕೆಎಸ್‌ಆರ್‌ಪಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರತಿ ವರ್ಷ ಜನವರಿ ಮತ್ತು ಜೂನ್‌ನಲ್ಲಿ ಕೆಎಸ್‌ಆರ್‌ಪಿಯಿಂದ ಸಿಬ್ಬಂದಿ ರೈಫಲ್ ಫೈರಿಂಗ್ ತರಬೇತಿ ನೀಡಲಾಗುತ್ತದೆ. ಈ ವೇಳೆ ಮೀಸ್ ಫೈರಿಂಗ್ ಆಗಿರುವ ಕಾಟ್ರೇಜ್(ಕೋಕಾ) ಮತ್ತು ಬಳಕೆಗೆ ಯೋಗ್ಯವಲ್ಲದ ಬುಲೆಟ್ ಗಳಲ್ಲಿರುವ ಗನ್ ಪೌಡರ್‌ಗಳನ್ನು ತೆಗೆದು ಕಾಟ್ರೇಜ್‌ಗಳನ್ನು ಸಂಗ್ರಹಿಸಲಾಗುತ್ತದೆ. ಈ ರೀತಿಯ ಕಾಟ್ರೇಜ್‌ಗಳನ್ನು ಸುತ್ತಿಗೆಯಲ್ಲಿ ಜಜ್ಜಿ ಪ್ರತಿ ವರ್ಷ ಪೊಲೀಸ್ ಇಲಾಖೆಯ ಸಶಸ್ತ್ರ ವಿಭಾಗಕ್ಕೆ ಕಳುಹಿಸಲಾಗುತ್ತದೆ. ಅದೇ ರೀತಿ ಈ ವರ್ಷ ಕಾನ್‌ಸ್ಟೇಬಲ್‌ಗಳಾದ ಚಂದ್ರಶೇಖರ್, ರಾಮನಿಂಗ ಕಾಟ್ರೇಜ್‌ಗಳನ್ನು ಸುತ್ತಿಗೆಯಿಂದ ಜಜ್ಜುತ್ತಿದ್ದರು. ಈ ವೇಳೆ ಒಂದೆರಡು ಬುಲೆಟ್ ಗಳಲ್ಲಿ ಗನ್ ಪೌಡರ್ ಉಳಿದುಕೊಂಡಿರುವ ಸಾಧ್ಯತೆಯಿದೆ. ಹೀಗಾಗಿ ಜಜ್ಜುವಾಗ ಸ್ಫೋಟಗೊಂಡಿದೆ. ಈ ವೇಳೆ ಇಬ್ಬರ ಕೈ ಮತ್ತು ಕಾಲುಗಳಿಗೆ ಸಣ್ಣ ಪ್ರಮಾಣದಲ್ಲಿ ಗಾಯಗಳಾಗಿವೆ. ಕೂಡಲೇ ಇತರೆ ಅಧಿಕಾರಿ-ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದು, ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ ಕೆಎಸ್‌ಆರ್‌ಪಿ ಸಂದೀಪ್ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹಾಗೆಯೇ ಕಾನ್‌ಸ್ಟೇಬಲ್‌ಗಳು ದಾಖಲಾಗಿದ್ದ ಆಸ್ಪತ್ರೆಗೂ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.