Advertisement

ಪಾಕ್‌ ಗುಂಡಿನ ದಾಳಿಗೆ ಇಬ್ಬರು ಮಕ್ಕಳು ಬಲಿ

06:45 AM Oct 03, 2017 | |

ಜಮ್ಮು: ಗಡಿಯಲ್ಲಿ ಸೋಮವಾರ ಪಾಕಿಸ್ಥಾನದ ಸೇನೆ ನಡೆಸಿರುವ ಅಟ್ಟಹಾಸಕ್ಕೆ ಇಬ್ಬರು ಮಕ್ಕಳು ಪ್ರಾಣತೆತ್ತಿದ್ದಾರೆ. ಜಮ್ಮು-ಕಾಶ್ಮೀರದ ಪೂಂಛ… ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್‌ ಸೇನೆಯು ಬೆಳ್ಳಂಬೆಳಗ್ಗೆಯೇ ಕದನ ವಿರಾಮ ಉಲ್ಲಂಘಿಸಿದೆ. ಅತ್ತ ಕಡೆಯಿಂದ ತೂರಿಬಂದ ಗುಂಡುಗಳು ತಾಕಿ, ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟರೆ, 12ಕ್ಕೂ ಹೆಚ್ಚು ನಾಗರಿಕರು ಗಾಯ ಗೊಂಡಿದ್ದಾರೆ. ಗಾಯಾಳುಗಳ ಪೈಕಿಯೂ 5 ಮಕ್ಕಳು ಸೇರಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

Advertisement

ಪದೇ ಪದೆ ಕದನ ವಿರಾಮ ಉಲ್ಲಂಘಿಸುತ್ತಿದ್ದರೂ ಭಾರತದ ಮೇಲೆ ಗೂಬೆ ಕೂರಿಸುತ್ತಾ ಬಂದಿರುವ ಪಾಕಿಸ್ಥಾನವು ಸೋಮವಾರ ಬೆಳಗ್ಗೆ 6.30ರ ವೇಳೆಗೆ ದಿಗ್ವಾರ್‌, ಶಾಹಪುರ್‌, ಖಸ್ಬಾ, ಕೆರ್ನಿ ಮತ್ತು ಮಂಧಾರ್‌ ವಲಯಗಳಲ್ಲಿ ಏಕಾಏಕಿ ಅಪ್ರಚೋದಿತ ದಾಳಿ ನಡೆಸಿದೆ. ಕೂಡಲೇ ನಮ್ಮ ಯೋಧರು ಪ್ರತಿದಾಳಿ ನಡೆಸಿದರಾದರೂ, ಅಷ್ಟರಲ್ಲಾಗಲೇ 15 ಮತ್ತು 9 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಬಲಿಯಾಗಿದ್ದರು. ಬೆಳಗ್ಗೆ ಆರಂಭವಾದ ಗುಂಡಿನ ಚಕಮಕಿ 11.30ರ ವರೆಗೂ ಮುಂದುವರಿದಿತ್ತು ಎಂದು ಪೂಂಛ… ಜಿಲ್ಲಾ ಅಭಿವೃದ್ಧಿ ಆಯುಕ್ತ ತಾರಿಕ್‌ ಅಹ್ಮದ್‌ ತಿಳಿಸಿದ್ದಾರೆ. ಇದೇ ವೇಳೆ, ನಾಗರಿಕರ ಸುರಕ್ಷತೆಗಾಗಿ ಸರಕಾರವು ಭೂಮಿಯಡಿ 40 ಸಮುದಾಯ ಬಂಕರ್‌ಗಳ ನಿರ್ಮಾಣ ಕಾರ್ಯ ಶುರುವಾಗಿದೆ ಎಂದೂ ಹೇಳಿದ್ದಾರೆ.

ನುಸುಳುಕೋರರ ಹತ್ಯೆ
ಇಲ್ಲಿನ ರಾಂಪುರ ಮತ್ತು ತಂಗ್‌ಧಾರ್‌ವಲಯದ ಎಲ್‌ಒಸಿ ಮೂಲಕ ಭಾರತದೊಳಕ್ಕೆ ನುಸುಳಲು ಯತ್ನಿಸಿದ ನಾಲ್ವರು ಉಗ್ರರನ್ನು ಸೇನಾಪಡೆ ಸದೆಬಡಿದಿದೆ. ಸೋಮವಾರ ಅತ್ತ ಪಾಕ್‌ ಗುಂಡಿನ ದಾಳಿ ನಡೆಸುತ್ತಿದ್ದಂ ತೆಯೇ, ಇತ್ತ ಒಳನುಸುಳಲು ಉಗ್ರರು ಸಂಚು ರೂಪಿಸಿದ್ದರು. ಆದರೆ, ಕೂಡಲೇ ಕಾರ್ಯಪ್ರವೃತ್ತರಾದ ಯೋಧರು, ನುಸುಳು ಕೋರರನ್ನು ಹತ್ಯೆಗೈದು, ಅವರಲ್ಲಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿ ಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next