Advertisement

ಎರಡೇ ಮಕ್ಕಳು ಸಾಕು! ಉತ್ತರ ಪ್ರದೇಶದಲ್ಲಿ ಪ್ರಸ್ತಾವಿತ ನೀತಿಯ ಕರಡು ಪ್ರತಿ ಬಿಡುಗಡೆ

02:45 AM Jul 11, 2021 | Team Udayavani |

ಲಕ್ನೋ: ಉತ್ತರ ಪ್ರದೇಶದಲ್ಲೂ ಇನ್ನು ಮುಂದೆ ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಪಡೆದರೆ ಸರಕಾರಿ ಯೋಜನೆಗಳು, ಸಬ್ಸಿಡಿ, ಸರಕಾರಿ ಉದ್ಯೋಗ ಸಿಗುವುದಿಲ್ಲ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಸ್ಪರ್ಧಿಸುವಂತಿಲ್ಲ !

Advertisement

ಅಸ್ಸಾಂ ಅನಂತರ ಉತ್ತರ ಪ್ರದೇಶದಲ್ಲೂ ಇಬ್ಬರು ಮಕ್ಕಳ ನೀತಿ ಜಾರಿಗೆ ತಯಾರಿ ನಡೆದಿದ್ದು, ಶನಿವಾರ ಯೋಗಿ ಆದಿತ್ಯನಾಥ್‌ ಸರಕಾರ ಕರಡು ನೀತಿ ಬಿಡುಗಡೆ ಮಾಡಿದೆ. ಜು. 19ರ ಒಳಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಬಹುದಾಗಿದೆ.

ಇನ್ನೇನು ಒಂದು ವರ್ಷದಲ್ಲಿ ಅಲ್ಲಿ ವಿಧಾನಸಭೆ ಚುನಾವಣೆ ಎದುರಾಗಲಿದ್ದು, ಈ ಹಿನ್ನೆಲೆಯಲ್ಲಿಯೇ ಈ ನೀತಿ ರೂಪಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜನಸಂಖ್ಯೆ ನಿಯಂತ್ರಣದ ಜತೆಗೆ ಕಡಿಮೆ ಮಕ್ಕಳನ್ನು ಪಡೆಯುವವರಿಗೆ ನಾನಾ ರೀತಿಯ ಪ್ರೋತ್ಸಾಹ ನೀಡುವ ಬಗ್ಗೆಯೂ ಈ ಕರಡು ನೀತಿಯಲ್ಲಿ ಪ್ರಸ್ತಾವಿಸಲಾಗಿದೆ.

ನಿಯಂತ್ರಣ ಕ್ರಮಗಳು
1. ಸರಕಾರಿ ಯೋಜನೆಗಳು ಅಥವಾ ಸಬ್ಸಿಡಿ ಸೌಲಭ್ಯ ಸಿಗುವುದಿಲ್ಲ
2. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲಾಗದು
3. ರಾಜ್ಯ ಸರಕಾರಿ ಉದ್ಯೋಗಕ್ಕೆ ಅರ್ಹರಲ್ಲ
4. ಸರಕಾರಿ ಉದ್ಯೋಗದಲ್ಲಿ ಭಡ್ತಿ ಪಡೆಯಲಾಗದು
5. ಕುಟುಂಬದ ನಾಲ್ವರಿಗಷ್ಟೇ ಪಡಿತರ ಆಹಾರ ಧಾನ್ಯ
6. ಸರಕಾರಿ ಉದ್ಯೋಗಿ 3ನೇ ಮಗು ಪಡೆದರೆ ಉದ್ಯೋಗದಿಂದ ವಜಾ

ಒಂದು ವರ್ಷದ ಅವಧಿ
ರಾಜ್ಯ ಗೆಜೆಟ್‌ ನಲ್ಲಿ ಪ್ರಕಟವಾದ ಒಂದು ವರ್ಷದ ಅವಧಿಯಲ್ಲಿ ಈ ನೀತಿ ಜಾರಿಗೆ ಬರಲಿದೆ. ಬಹುವಿವಾಹ ಪದ್ಧತಿಯ ಬಗ್ಗೆ ಇದರಲ್ಲಿ ಪ್ರಸ್ತಾವಿಸಲಾಗಿದೆ. ಪುರುಷನೊಬ್ಬ ಮೂವರು ಸ್ತ್ರೀಯರನ್ನು ವಿವಾಹವಾಗಿದ್ದರೆ, ಆತನಿಗೆ ಸಂಬಂಧಿಸಿ ಒಂದು ವಿವಾಹವನ್ನು ಮಾತ್ರ ಪರಿಗಣಿಸಲಾಗುತ್ತದೆ. ಆದರೆ ಪತ್ನಿಯರಿಗೆ ಸಂಬಂಧಿಸಿ ಬೇರೆ ಬೇರೆ ಎಂದೇ ಪರಿಗಣಿಸಲಾಗುತ್ತದೆ.

Advertisement

ಅವಳಿ ಮಕ್ಕಳಿಗೆ ವಿನಾಯಿತಿ
ಮೊದಲು ಒಂದು ಮಗುವಾಗಿ, ಎರಡನೇ ಬಾರಿಯಲ್ಲಿ ಅವಳಿ ಮಕ್ಕಳಾದರೆ ವಿನಾಯಿತಿ ಸಿಗಲಿದೆ. ಅಲ್ಲದೆ, ಮೊದಲು ಹುಟ್ಟಿದ ಇಬ್ಬರು ಮಕ್ಕಳು ದಿವ್ಯಾಂಗರಾಗಿದ್ದರೆ, 3ನೇ ಮಗು ಪಡೆದಾಗ; ಮೊದಲ ಮತ್ತು ಎರಡನೇ ಮಗು ನಿಧನ ಹೊಂದಿ 3ನೇ ಮಗುವನ್ನು ಪಡೆದರೆ ವಿನಾಯಿತಿ ಇದೆ. ಈಗಾಗಲೇ ಇಬ್ಬರು ಮಕ್ಕಳನ್ನು ಪಡೆದಿರುವ ದಂಪತಿ ಈ ನೀತಿ ಜಾರಿಯಾಗುವ ಒಂದು ವರ್ಷದೊಳಗೆ ಮತ್ತೂಂದು ಮಗು ಪಡೆದರೆ ಕೂಡ ವಿನಾಯಿತಿ ಸಿಗಲಿದೆ.

ಇಬ್ಬರು ಮಕ್ಕಳಿದ್ದರೆ
1. ಮನೆ ಕಟ್ಟುವಾಗ ಸರಳವಾಗಿ ಸಾಲ, ಕಡಿಮೆ ಬಡ್ಡಿದರ
2. ನೀರು, ವಿದ್ಯುತ್‌ ದರ, ಮನೆ ತೆರಿಗೆ ಮನ್ನಾ
3. ಸರಕಾರಿ ನೌಕರರಿಗೆ ಎರಡು ಬಾರಿ ಹೆಚ್ಚುವರಿ ಭಡ್ತಿ
4. 12 ತಿಂಗಳ ವೇತನ, ಭತ್ತೆ ಸಹಿತ ಹೆರಿಗೆ ರಜೆ
5. ಉಚಿತ ವೈದ್ಯಕೀಯ ಸೌಲಭ್ಯ, ಪತ್ನಿಗೆ ವಿಮಾ ಸೌಲಭ್ಯ

ಒಂದೇ ಮಗುವಿದ್ದರೆ
– ದಂಪತಿಗೆ ಉಚಿತ ವೈದ್ಯಕೀಯ ವಿಮೆ
– ಮಗುವಿಗೆ 20 ವರ್ಷಗಳಾಗುವ ವರೆಗೆ ವಿಮೆ
– ಐಐಎಂ, ಏಮ್ಸ್‌ ಗಳಲ್ಲಿ ಆದ್ಯತೆ ಮೇರೆಗೆ ಪ್ರವೇಶ
– ಪದವಿ ಹಂತದ ವರೆಗೆ ಉಚಿತ ಶಿಕ್ಷಣ ಮತ್ತು ವಿದ್ಯಾರ್ಥಿ ವೇತನ
– ಹೆಣ್ಣು ಮಗುವಾಗಿದ್ದರೆ ಸ್ನಾತಕೋತ್ತರದವರೆಗೆ ಉಚಿತ ಶಿಕ್ಷಣ
– ಸರಕಾರಿ ಉದ್ಯೋಗಗಳಲ್ಲಿ ಆದ್ಯತೆ
– ಸರಕಾರಿ ಉದ್ಯೋಗಿಗಳಿಗೆ ನಾಲ್ಕು ಭಡ್ತಿ
– ಬಡವರಾಗಿದ್ದು, ಒಂದು ಗಂಡು ಮಗು ಪಡೆದರೆ 80 ಸಾವಿರ ರೂ. ಪ್ರೋತ್ಸಾಹಧನ
– ಬಡವರಾಗಿದ್ದು, ಒಂದು ಹೆಣ್ಣುಮಗು ಪಡೆದರೆ 1 ಲಕ್ಷ ರೂ. ಪ್ರೋತ್ಸಾಹಧನ

ಎಲ್ಲೆಲ್ಲಿ ಇಬ್ಬರು ಮಕ್ಕಳ ನೀತಿ?
– ರಾಜಸ್ಥಾನ: ಸರಕಾರಿ ಉದ್ಯೋಗ ಇಲ್ಲ, ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ಅನರ್ಹ
– ಮಧ್ಯಪ್ರದೇಶ: ಸರಕಾರಿ ಉದ್ಯೋಗಕ್ಕೆ ಅರ್ಹತೆ ಇಲ್ಲ, ಇದು ನ್ಯಾಯಾಂಗಕ್ಕೂ ಅನ್ವಯವಾಗುತ್ತದೆ.
– ತೆಲಂಗಾಣ, ಆಂಧ್ರ ಪ್ರದೇಶ: ಸ್ಥಳೀಯ ಪಂಚಾಯತ್‌ ಚುನಾವಣೆಗಳಲ್ಲಿ ಸ್ಪರ್ಧಿಸಲು ಅನರ್ಹರಾಗುತ್ತಾರೆ.
– ಗುಜರಾತ್‌: ಸ್ಥಳೀಯ ಸಂಸ್ಥೆ ಚುನಾವಣೆಗೆ ಅನರ್ಹ.
– ಮಹಾರಾಷ್ಟ್ರ : ಸ್ಥಳೀಯ ಸಂಸ್ಥೆ ಚುನಾವಣೆಗೆ ಅನರ್ಹ. ಸರಕಾರಿ ನೌಕರಿಯಿಂದ ವಜಾ. ಮಹಿಳೆಗೆ ಪಡಿತರ ಸಿಗದು.
– ಉತ್ತರಾಖಂಡ : ಜಿ.ಪಂ., ವಿಭಾಗವಾರು ಚುನಾವಣೆಗಳಲ್ಲಿ ಮಾತ್ರ ಸ್ಪರ್ಧಿಸಲು ಅರ್ಹತೆ ಇಲ್ಲ.
– ಒಡಿಶಾ : ಜಿ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಲು ಆಗುವುದಿಲ್ಲ.
– ಅಸ್ಸಾಂ: ಇತ್ತೀಚೆಗಷ್ಟೇ ಇದೇ ನೀತಿ ಜಾರಿ ಮಾಡಲು ಮುಂದಾಗಿದೆ. ಎಲ್ಲ ಸರಕಾರಿ ಯೋಜನೆಗಳು ಈ ನೀತಿಗೆ ಜೋಡಣೆ.

Advertisement

Udayavani is now on Telegram. Click here to join our channel and stay updated with the latest news.

Next