ಬೈಲಹೊಂಗಲ: ಹೈಕೋರ್ಟ್ ಆದೇಶವಿದ್ದರೂ ಅಪಘಾತ ಹೊಂದಿದ ಗಾಯಾಳುಗಳಿಗೆ ಪರಿಹಾರ ನೀಡದ ಕೆಎಸ್‌ಆರ್‌ಟಿಸಿ ಸಂಸ್ಥೆಯ ಬೈಲಹೊಂಗಲ ಘಟಕದ ಎರಡು ಬಸ್ಸುಗಳನ್ನು ನ್ಯಾಯಾಲಯದ ಆದೇಶದ ಮೇರೆಗೆ ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. 2012ರಲ್ಲಿ ವಾಹನ ಅಪಘಾತ ಪ್ರಕರಣದಲ್ಲಿ ತಾಲೂಕಿನ ಗುಡಕಟ್ಟಿ ಗ್ರಾಮದಿಂದ ಬೈಲಹೊಂಗಲಕ್ಕೆ ಮರಳುತ್ತಿದ್ದ ಬಸ್‌ಗೆ ಪಟ್ಟಿಹಾಳ ಕ್ರಾಸದಲ್ಲಿ ಹಿಟ್ಟಣಗಿ ಗ್ರಾಮದಿಂದ ಬಂದ ಬಸ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ 9 ಜನರು ಗಾಯೊಂಡಿದ್ದರು. ಗಾಯಗೊಂಡಿದ್ದ ಈರವ್ವ ವೀರಪ್ಪ ಹುಚ್ಚಗೌಡರ, ರೇಷ್ಮಾ ಬಾಬುಸಾಬ ಜೋರಮ್ಮನವರ ಅವರ ಪರವಾಗಿ ನ್ಯಾಯವಾದಿಗಳಾದ ವೀರೇಂದ್ರ ಸಂಗೊಳ್ಳಿ, ಎಂ.ಎಂ. ಅಬ್ಟಾಯಿ ವಕಾಲತು ನಡೆಸಿದ್ದರು. ಲೋಕ ಅದಾಲತನಲ್ಲಿ ರಾಜಿ ಆದ ಪ್ರಕರಣಕ್ಕೆ 15 ದಿನಗಳಲ್ಲಿ ಪರಿಹಾರ ನೀಡಬೇಕೆಂದು ಆದೇಶ ಮಾಡಿದ್ದರೂ ಇದುವರೆಗೆ ಪರಿಹಾರ ನೀಡದ ಕೆಎಸ್‌ಆರ್‌ಟಿಸಿಯ ಬಸ್ ಜಪ್ತಿ ಮಾಡಲು ಬೈಲಹೊಂಗಲ ದಿವಾಣಿ ಹಿರಿಯ ಶ್ರೇಣಿ ನ್ಯಾಯಾಧೀಶರು ಆದೇಶ ಮಾಡಿದ್ದರಿಂದ ಎರಡು ಬಸುಗಳನ್ನು ಜಪ್ತಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಈ ವೇಳೆ ನ್ಯಾಯವಾದಿಗಳಾದ ವೀರೇಂದ್ರ ಸಂಗೊಳ್ಳಿ, ಎ.ಎಫ್. ಪಟ್ಟಿಹಾಳ, ಆನಂದ ನರಸನ್ನವರ, ಬಸವರಾಜ ದೋತರದ, ರಮೇಶ ಕುರಬರ ಇತರರು ಇದ್ದರು.