ದೋಟಿಹಾಳ: ಗ್ರಾಮದ 35 ವರ್ಷದ ಹಾಗೂ 33 ವರ್ಷದ ಅಣ್ಣತಮ್ಮಂದಿರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಒಬ್ಬರು ಕೊಪ್ಪಳದ ಕೋವಿಡ್ ಕೇರ್ ಸೆಂಟರ್ ಹಾಗೂ ಇನ್ನೊಬ್ಬರು ಹೋಂ ಕ್ವಾರಂಟೈನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗ್ರಾಮದ 33 ವರ್ಷದ ವ್ಯಕ್ತಿ ಕೊಪ್ಪಳದಲ್ಲಿ ಪೊಲೀಸ್ ಸಿಬ್ಬಂದಿಯಾದ ಕರ್ತವ್ಯ ನಿರ್ವಹಿಸುತ್ತಿದ್ದನು. ಸೋಮವಾರ ಈತನಿಗೆ ಸೋಂಕು ದೃಢಪಟ್ಟದೆ. ಶನಿವಾರ ಬಕ್ರೀದ್ ಹಬ್ಬಕ್ಕೆ ದೋಟಿಹಾಳ ಗ್ರಾಮಕ್ಕೆ ಬಂದಿದ್ದಾನೆ. ಹೀಗಾಗಿ ಈತನ ಕುಟುಂಬಸ್ಥರನ್ನು ಬುಧವಾರ ಕುಷ್ಟಗಿ ತಾಲೂಕು ಆಸ್ಪತ್ರೆಯಲ್ಲಿ ರ್ಯಾಪಿಡ್ ಟೆಸ್ಟ್ ಮಾಡಿದಾಗ 35 ವರ್ಷದ ಈತನ ಅಣ್ಣನಿಗೂ ಸೋಂಕು ತಗುಲಿರುವುದು ಪತ್ತೆಯಾಗಿದೆ.
ಅಣ್ಣ ರೋಣ ಕೆಎಸ್‌ಆರ್‌ಟಿಸಿ ಘಟಕದ ಸಿಬ್ಬಂದಿಯಾಗಿದ್ದು, ಇಬ್ಬರು ದೋಟಿಹಾಳದಲ್ಲಿ ಶನಿವಾರ ಬಕ್ರೀದ್ ಹಬ್ಬ ಆಚರಿಸಿದ್ದಾರೆ. ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಬ್ಬಕ್ಕೆ ರಜೆಗೆ ಬಂದಿದ್ದು, ಮರಳಿ ಕೆಲಸಕ್ಕೆ ಹೋಗಿಲ್ಲ. ಈತನ ಪ್ರಥಮ-10 ಹಾಗೂ ದ್ವಿತೀಯ ಸಂಪರ್ಕದಲ್ಲಿ 8 ಜನ ಇದ್ದಾರೆ. ಇನ್ನೂ ಅನೇಕರು ಬಕ್ರೀದ್ ಆಚರಣೆ ವೇಳೆ ಇವರ ಸಂಪರ್ಕಕ್ಕೆ ಬಂದಿದ್ದು ಎಲ್ಲರಿಗೂ ಆತಂಕ ಶುರುವಾಗಿದೆ.
ಹೋಂ ಕ್ವಾರಂಟೈನ್ ಎಷ್ಟರ ಮಟ್ಟಿಗೆ ಸರಿ?: ಗ್ರಾಮದ 35 ವರ್ಷದ ವ್ಯಕ್ತಿಗೆ ಬುಧವಾರ ಸೋಂಕು ಪತ್ತೆಯಾಗಿದೆ. ಸೋಂಕಿತನನ್ನು ಆರೋಗ್ಯ ಇಲಾಖೆಯವರು ಕೋವಿಡ್ ಕೇರ್ ಸೆಂಟರ್ ಕಳಿಸದೇ ಹೋಂ ಕ್ವಾರಂಟೈನಲ್ಲಿಟ್ಟು ಚಿಕಿತ್ಸೆ ನೀಡುತ್ತಿರುವುದು ಗ್ರಾಮಸ್ಥರಲ್ಲಿ ಢವಢವ ಶುರುವಾಗಿದೆ. ಸೋಕಿತರ ಮನೆಯಲ್ಲಿ ಒಟ್ಟು 10 ಜನರಿದ್ದು, ಎಲ್ಲರೂ ಒಂದೇ ಶೌಚಾಲಯ, ಸ್ನಾನದ ಕೋಣೆ ಇದೆ. ಹೀಗಿರುವಾಗ ಆರೋಗ್ಯ ಇಲಾಖೆಯವರು ಸೋಂಕಿತನಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಎನ್ನುವುದು ಸಾರ್ವಜನಿಕರ ಪ್ರಶ್ನೆ. ಕಂದಾಯ-ಆರೋಗ್ಯ ಇಲಾಖೆ ಮತ್ತು ಗ್ರಾಪಂನವರು ಸೇರಿ ಸೋಂಕಿತರ ಮನೆ ಸುತ್ತಮುತ್ತಲಿನ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಪರಿಗಣಿಸಿ ಸೀಲ್‌ಡೌನ್ ಮಾಡಿದ್ದಾರು.
ಈ ವೇಳೆ ಡಾ| ನೇತ್ರಾವತಿ.ಬಿ.ಕೆ, ಪಿಡಿಒ ರಾಮಣ್ಣ ದಾಸರ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ಬಸವರಾಜ ಚೌಕಾವಿ, ವೆಂಕಟೇಶ ರೆಡ್ಡಿ ಇತರರು ಇದ್ದರು.