Advertisement

ಎರಡು ಸೇತುವೆ ಸಂಚಾರ ಮುಕ್ತ

11:05 AM Sep 13, 2019 | Suhan S |

ಚಿಕ್ಕೋಡಿ: ನೆರೆಯ ಮಹಾರಾಷ್ಟ್ರ ಹಾಗೂ ರಾಜ್ಯದ ಗಡಿ ಭಾಗದಲ್ಲಿ ಮಳೆಯ ಅಬ್ಬರ ಸಂಪೂರ್ಣ ತಗ್ಗಿದ್ದು ಚಿಕ್ಕೋಡಿ ತಾಲೂಕಿನ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳ ನೀರಿನ ಮಟ್ಟ ಇಳಿಮುಖವಾಗಿದೆ. ಚಿಕ್ಕೋಡಿ ತಾಲೂಕಿನ ಎರಡು ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.

Advertisement

ಮಹಾರಾಷ್ಟ್ರದ ಕೊಯ್ನಾ, ರಾಧಾನಗರಿ, ಕಾಳಮ್ಮವಾಡಿ, ದೋಮ್‌ ಮುಂತಾದ ಜಲಾಶಯಗಳಿಂದ ಬಿಡುವ ನೀರಿನ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಗಡಿ ಭಾಗದ ಮೂರು ನದಿಗಳ ನೀರಿನ ಮಟ್ಟದಲ್ಲಿ ಎರಡು ಅಡಿಯಷ್ಟು ಇಳಿಕೆ ಕಂಡು ಬಂದಿದೆ. ಇದರಿಂದ ದೂಧಗಂಗಾ ನದಿಯ ಸದಲಗಾ-ಬೋರಗಾಂವ, ಯಕ್ಸಂಬಾ-ಧಾನವಾಡ ಸೇತುವೆ ಮೇಲಿನ ನೀರು ಕಡಿಮೆಯಾಗಿದ್ದು, ಎರಡು ಸೇತುವೆ ಮೇಲೆ ಸಂಚಾರ ಪುನಃ ಆರಂಭವಾಗಿವೆ.

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್‌ದಿಂದ ಕೃಷ್ಣಾ ನದಿಗೆ 1.56 ಲಕ್ಷ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ದೂಧಗಂಗಾ ಮತ್ತು ವೇದಗಂಗಾ ನದಿಗಳಿಂದ 29 ಸಾವಿರ ಕ್ಯೂಸೆಕ್‌ ನೀರು ಹರಿದು ಕೃಷ್ಣಾ ನದಿಗೆ ಸೇರುತ್ತದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಹತ್ತಿರ ಕೃಷ್ಣಾ ನದಿಗೆ ಒಟ್ಟು 1.84 ಲಕ್ಷ ಕ್ಯೂಸೆಕ್‌ ನೀರು ಹರಿದು ಹಿಪ್ಪರಗಿ ಬ್ಯಾರೇಜಿಗೆ ಹೋಗುತ್ತಿದೆ. ಹಿಪ್ಪರಗಿ ಬ್ಯಾರೇಜ್‌ದಿಂದ 1.99 ಲಕ್ಷ ಕ್ಯೂಸೆಕ್‌ ನೀರನ್ನು ಆಲಮಟ್ಟಿಗೆ ಹರಿ ಬಿಡಲಾಗುತ್ತಿದೆ.

ಕೊಂಕಣ ಭಾಗದಲ್ಲಿ ಮಳೆ ತಗ್ಗಿದೆ. ನದಿಗಳ ನೀರಿನ ಮಟ್ಟದಲ್ಲಿ ಇಳಿಕೆ ಕಂಡು ಬಂದಿದೆ. ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿ ನೀರಿನ ಮಟ್ಟದಲ್ಲಿ ಗುರುವಾರ 15 ಸಾವಿರ ಕ್ಯೂಸೆಕ್‌ ನೀರು ಕಡಿಮೆಯಾಗಿದೆ. ಶನಿವಾರ ಸಂಜೆ ಮತ್ತು ರವಿವಾರ ಬೆಳಗ್ಗೆ ಚಿಕ್ಕೋಡಿ ತಾಲೂಕಿನ ಎಲ್ಲ ಸೇತುವೆಗಳು ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆ ಮಾಡಲಾಗಿದೆ ಎಂದು ನೀರಾವರಿ ನಿಗಮದ ಕಾರ್ಯನಿರ್ವಾಹಕ ಅಭಿಯಂತ ಸಿ.ಡಿ. ಪಾಟೀಲ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next