Advertisement
ಇಲ್ಲೊಂದು ನೈಜ ಘಟನೆ ಇದೆ. ಮುಂಬೈನ ಇಬ್ಬರು ಸ್ನೇಹಿತರು ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರತಿದಿನ ವಡಾಪಾವ್ ತಿನ್ನುತ್ತಿದ್ದರು. ಅವರ ಪಾಕೆಟ್ ಹಣದ ಹೆಚ್ಚಿನ ಪಾಲು ವಡಾಪಾವ್ ಗೋಸ್ಕರ ಖರ್ಜಾಗುತ್ತಿತ್ತು. ತಮ್ಮ ಕಾಲೇಜಿನ ಶಿಕ್ಷಣ ಮುಗಿಸಿ ಈ ಇಬ್ಬರೂ ಹೆಚ್ಚಿನ ಅಧ್ಯಯನಕ್ಕಾಗಿ ಲಂಡನ್‌ಗೆ ಹೋದರು. ಆದರೆ ಮುಂಬೈನಲ್ಲಿ ದೊರೆಯುತ್ತಿದ್ದ ವಡಾಪಾವ್ ಮತ್ತು ಸ್ವಾದಭರಿತ ಚಹಾವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದರು.
ಇದು ಸುಜಯ್ ಸೊಹಾನಿ ಮತ್ತು ಸುಬೋಧ್ ಜೋಶಿ ಅವರ ನೈಜ ಯಶೋಗಾಥೆ. ಈ ಇಬ್ಬರು ಕಳೆದ 25 ವರ್ಷಗಳಿಂದ ಸ್ನೇಹಿತರು. ಅದು 1999ರ ಸಮಯ. ಮುಂಬೈನ ರಿಜ್ವಿ ಕಾಲೇಜಿನಲ್ಲಿ ಓದುತ್ತಿದ್ದರು. ಅಲ್ಲಿನ ಕಾಲೇಜೊಂದರಲ್ಲಿ ಇವರು ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆಯುತ್ತಿದ್ದರು. ಮೂರು ವರ್ಷಗಳ ಅಧ್ಯಯನದ ಅನಂತರ, ಹೋಟೆಲ್ ಮ್ಯಾನೇಜ್‌ಮೆಂಟ್‌ನಲ್ಲಿ ಪಿಜಿ ಮಾಡುವ ಗುರಿ ಇಟ್ಟುಕೊಂಡು ಉತ್ತಮ ಕಾಲೇಜಿನ ಹುಡುಕಾಟದಲ್ಲಿದ್ದರು. ಅನೇಕ ಪ್ರವೇಶ ಪರೀಕ್ಷೆಗಳನ್ನು ಬರೆದಿದ್ದರು. ಅಂತಿಮವಾಗಿ ಯುಕೆ ವಿಶ್ವವಿದ್ಯಾಲಯವೊಂದರಲ್ಲಿ ಪ್ರವೇಶ ಲಭಿಸಿತು. ಕೋರ್ಸ್ 18 ತಿಂಗಳು ಮತ್ತು 9 ತಿಂಗಳ ಇಂಟರ್ನ್‌ಶಿಪ್ ಅವಕಾಶ ದೊರೆಯಿತ್ತು. 2003ರಲ್ಲಿ ಇಬ್ಬರೂ ಇಂಟರ್ನ್‌ಶಿಪ್ ಪಡೆದರು.
Related Articles
Advertisement
ಕೆಲಸ ಸಿಕ್ಕಿತು; ಆದರೆ…ತಮ್ಮಇಂಟರ್ನ್‌ಶಿಪ್ ಅನ್ನು ನೋಡಿದ ಸಂಸ್ಥೆ ಉದ್ಯೋಗಗಳನ್ನು ಸಹ ನೀಡಿ, ವೀಸಾ ಅವಧಿಯನ್ನೂ ವಿಸ್ತರಿಸಿತ್ತು. ಎಲ್ಲ ಕೆಲಸ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ 2009ರಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟ ಕಾರಣ ಸುಜಯ್ ಅವರ ಕೆಲಸ ಕಳೆದುಹೋಯಿತು. ಇದು ಇವರ ಜೀವನಕ್ಕೆ ತಿರುವನ್ನು ಒದಗಿಸಿತು. ಲಂಡನ್‌ನಲ್ಲಿದ್ದಾಗ ಇಬ್ಬರೂ ವಡಾಪಾವ್ ಮತ್ತು ಬೇಯಿಸಿದ ಚಹಾವನ್ನು ಕುಡಿಯಲು ಸಾಕಷ್ಟು ಆಸೆಪಟ್ಟಿದ್ದರು. ಆದರೆ ಸಾಧ್ಯವಾಗಿರಲಿಲ್ಲ. ಸುಜಯ್ ಅವರ ಕೆಲಸ ಹೋದಾಗ ಇಬ್ಬರು ಇಲ್ಲಿ ವಡಾಪಾವ್ ವ್ಯವಹಾರವನ್ನು ಯಾಕೆ ಪ್ರಾರಂಭಿಸಬಾರದು ಎಂದು ಯೋಜಿಸಿದ್ದರು. ಆದರೆ ತುಂಬಾ ಉಳಿತಾಯ ಆಗಲಿ ಯಾವುದೇ ಆಸ್ತಿ ಇರಲಿಲ್ಲ. ಇಬ್ಬರಿಗೂ ಗೃಹ ಸಾಲಗಳು ಇದ್ದ ಕಾರಣ ವೇತನ ಬ್ಯಾಂಕಿಗೆ ಸಂದಾಯವಾಗುತ್ತಿತ್ತು. ಆದ್ದರಿಂದ ಸುಬೋಧ್ ಅವರು ಕೆಲಸ ಮುಂದುವರಿಸಲು ಮುಂದಾಗಿ, ಸುಜಯ್ ಸಂಪೂರ್ಣವಾಗಿ ವ್ಯವಹಾರದಲ್ಲಿ ತೊಡಗುವುದು ಎಂಬ ನಿರ್ಧಾರಕ್ಕೆ ಇಬ್ಬರು ಬಂದಿದ್ದರು. ಲಂಡನ್‌ನಲ್ಲಿನ ಉತ್ತಮ ಸ್ಥಳದ ಬಾಡಿಗೆಗೆ ಅಂಗಡಿ ಪಡೆಯಲು 6 ತಿಂಗಳ ಠೇವಣಿ ತೆಗೆದುಕೊಳ್ಳಲಾಗುತ್ತದೆ. ಆದರೆ ಈ ಇಬ್ಬರು ಯುವಕರಲ್ಲಿ ಅಷ್ಟು ಬಂಡವಾಳ ಇರಲಿಲ್ಲ. ಹೀಗಾಗಿ ಸುಲಭಕ್ಕೆ ದೊರೆಯುವ ಸ್ಥಳವನ್ನು ಹುಡುಕುತ್ತಿದ್ದರು. ಹೀಗೆ ಹುಡುಕುತ್ತಿರುವಾಗ ಅವರು ಪೋಲೆಂಡ್‌ನಲ್ಲಿ ಕೆಫೆಯನ್ನು ಕಂಡುಕೊಂಡರು. ಇಲ್ಲಿಯೇ ಕೆಫೆಯವರಲ್ಲಿ ಒಂದು ಸಣ್ಣ ಸ್ಥಳವನ್ನು ಕೇಳಿದ್ದರು. ಆದರೆ ಅವನು ಕೊಡುತ್ತಾನೆ ಎಂಬ ನಿರೀಕ್ಷೆ ಇವರಿಗೆ ಇರಲಿಲ್ಲ. ಆದರೆ ಕೆಫೆಯ ಮಾಲಕ ಒಪ್ಪಿದನು. ಅವರು ಅಡುಗೆ ಮನೆಯಲ್ಲಿ ಒಂದು ಸಣ್ಣ ಜಾಗ, ಕೆಫೆಯಲ್ಲಿ ಎರಡು ಟೇಬಲ್-ಕುರ್ಚಿಗಳನ್ನು ಬಳಸಲು ಅನುಮತಿ ನೀಡಿದರು. ಇದು ಇವರಲ್ಲಿ ಈ ವ್ಯವಹಾರ ಬೆಳೆಯಲು ಸ್ಫೂರ್ತಿಯಾಯಿತು.
ಭಾರತದಂತೆ ಚಹಾವನ್ನು ಅಂಗಡಿ ಅಂಗಡಿ ಹೋಗಿ ಮಾರಾಟ ಮಾಡುವ ವಿಧಾನ ಲಂಡನ್‌ನಲ್ಲಿ ಇರಲಿಲ್ಲ. ಹೀಗಾಗಿ ಈ ಸ್ನೇಹಿತರು ಅದನ್ನೂ ಲಂಡನ್‌ನಲ್ಲಿ ಪ್ರಾರಂಭಿಸುತ್ತಾರೆ. ಏಕೆಂದರೆ ಲಂಡನ್‌ನಲ್ಲಿ ಯಾರೂ ಅಂತಹ ಚಹಾ ವಿತರಣೆ ಮಾಡುವ ಕ್ರಮ ಹೊಂದಿಲ್ಲ.ಇಲ್ಲಿ ಚಹಾ ವಿತರಿಸುತ್ತಾ ವಡಾಪಾವ್‌ನ ಆರ್ಡರ್‌ಗಳನ್ನು ಪಡೆಯುತ್ತಿದ್ದರು. “ನಿಮಗೆ ಚಹಾ ಕುಡಿಯಬೇಕೆಂದು ಭಾವಿಸಿದಾಗ ಅಥವಾ ವಡಾಪಾವ್ ತಿನ್ನಲು ಬಯಸಿದಾಗ, ನೀವು ನಮಗೆ ಕರೆ ಮಾಡಿ ಮತ್ತು ಅಂಗಡಿಗೆ ಅದನ್ನು ಒದಗಿಸುತ್ತೇವೆʼ ಎಂದು ಹೇಳಿ ಮೊಬೈಲ್ ಸಂಖ್ಯೆಯನ್ನು ನೀಡುತ್ತಿದ್ದರು. ಹೀಗೆ ಈ ವಿಧಾನ ಲಂಡನ್‌ನ ಸುತ್ತ ಪಸರಿಸಿ ಒಂದಷ್ಟು ಹೆಸರನ್ನು ಸಂಪಾಧಿಸಲಾರಂಭವಾಯಿತು. ಚಹಾ ಕಲ್ಪನೆ ಲಂಡನ್‌ನಲ್ಲಿ ಕ್ಲಿಕ್ ಆಯಿತು. ವಡಾಪಾವ್‌ಗಾಗಿ ಆರ್ಡರ್‌ಗಳು ಹೆಚ್ಚಾದವು. ಗ್ರಾಹಕರು ಕೆಫೆಗೆ ಬಂದು ಆಹಾರ ಸೇವಿಸಲು ಶುರುಮಾಡಿದರು. ಇದು ಮತ್ತೊಂದು ಸಮಸ್ಯೆಗೆ ಕಾರಣವಾಯಿತು. ಸ್ನೇಹಿತರು ಬಳಸುತ್ತಿದ್ದ ಕೆಫೆಗಳಲ್ಲಿ ಇವರದೇ ಜನರು ತುಂಬಲು ಪ್ರಾರಂಭವಾಯಿತು. ಈ ಕಾರಣದಿಂದಾಗಿ ಮೊದಲು ನಾವು 400 ಪೌಂಡ್ ಬಾಡಿಗೆ ಪಾವತಿಸುತ್ತಿದ್ದರೆ, ಬಳಿಕ ಅದನ್ನು 1500 ಪೌಂಡ್‌ಗಳಿಗೆ ಕೆಫೆಯ ಮಾಲಕರು ಏರಿಸಿದರು. ಸುಬೋಧ್ ಬಳಿಕ ಕೆಲಸ ಬಿಟ್ಟರು
ಸ್ವಲ್ಪ ಸಮಯ ಅಲ್ಲೇ ವ್ಯಾಪಾರ ಮಾಡಿದ ಅವರು ಬಳಿಕ ಬೇರೆ ಕಡೆಗೆ ಸ್ಥಳಾಂತರಗೊಂಡರು. ಅಲ್ಲಿನ ಬಾಡಿಗೆಯು ಸುಮಾರು2 ಸಾವಿರ ಪೌಂಡ್‌ಗಳಷ್ಟಿತ್ತು. ಆದರೆ ಅವರು ಉತ್ತಮ ಗ್ರಾಹಕರನ್ನು ಸಂಪಾದಿಸಿದ ಕಾರಣ ವ್ಯಾಪಾರವೃದ್ಧಿಯಾಗುತ್ತಾ ಹೋಗಲಾರಂಭವಾಯಿತು. ಅಷ್ಟರ ತನಕ ಸುಜಯ್ ಒಬ್ಬರೇ ಇದನ್ನು ನಡೆಸುತ್ತಿದ್ದರು. ಸಂಜೆಯ ಶಿಫ್ಟ್ ಬಳಿಕ ಸುಭೋದ್ ಬರುತ್ತಿದ್ದರು. ಜನರ ಸ್ಪಂದನೆ ಹೆಚ್ಚಾದ ಕಾರಣ ಸುಬೋಧ್ ಕೆಲಸ ತ್ಯಜಿಸಿ, ಇಬ್ಬರೂ ಪೂರ್ಣ ಸಮಯ ಕೆಲಸ ಮಾಡಲು ಪ್ರಾರಂಭಿಸಿದರು. ಮದುವೆಯಾದ ಬಳಿಕ ಹೆಂಡತಿಯೂ ಇದರಲ್ಲೇ ಕೆಲಸ ಮಾಡಲು ಪ್ರಾರಂಭಿಸಿದರು. ಇವರ ಕೆಲವು ಕಚೇರಿ ಸಹೋದ್ಯೋಗಿಗಳು ಸಹ ಕೆಲಸ ಬಿಟ್ಟು ಇವರೊಂದಿಗೆ ಸೇರಿಕೊಂಡರು. ಇಲ್ಲಿ ಯಾಕೆ ಇಷ್ಟು ಜನಸಂದಣಿ ಇದೆ ಎಂದು ವಿಚಾರಿಸಲು ಪೊಲೀಸರು ಬರಲು ಆರಂಭಿಸಿದ್ದರು.
ಬೇಯಿಸಿದ ಚಹಾ, ಮೀಸಲ್ ಪಾವ್, ಪಾವ್‌ಬಾಜಿ, ಭಜಿಯಾ, ಸಮೋಸಾ ಮೊದಲಾದ ಆಹಾರಕ್ಕೆ ಬೇಡಿಯೂ ವೃದ್ಧಿಯಾಯಿತು.ಎಲ್ಲವನ್ನೂ ಭಾರತೀಯ ಶೈಲಿಯಲ್ಲಿ ಮಾತ್ರ ಬಳಸುತ್ತಿದ್ದ ಕಾರಣ ಜನರು ಇಷ್ಟಪಟ್ಟಿದ್ದಾರೆ. ಹೀಗೆ ಉದ್ಯಮ ಬೆಳೆದು 2017 ರ ಹೊತ್ತಿಗೆ ನಾಲ್ಕು ಶಾಖೆಗಳಿದ್ದವು. ಈಗ ಐದು ಬ್ರಾಂಡ್‌ಗಳಾಗಿವೆ. ಶಾಖೆ ಬೆಳೆದಂತೆ ಮೆನು ಐಟಂಗಳೂ ಹೆಚ್ಚಾಗಿವೆ. ಲಾಕ್‌ಡೌನ್ ಬಳಿಕ ಆಗಸ್ಟ್‌ನಲ್ಲಿಯೇ ಮತ್ತೊಂದು ಹೊಸ ಶಾಖೆಯನ್ನು ಪ್ರಾರಂಭಿಸಿದ್ದಾರೆ. ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ ಎಂಬುದಕ್ಕೆ ಇದು ಉದಾಹರಣೆ. ಈ ಸ್ನೇಹಿತರನ್ನು ನೋಡಿದ ಬಳಿಕ ಲಂಡನ್‌ನಲ್ಲಿ ಅನೇಕರು ವಡಾ ಪಾವ್ ಮಾಡಲು ಮುಂದಾದರೂ ಅದು ಯಶಸ್ಸು ಕಾಣಲಿಲ್ಲ. ಸದ್ಯ ಇವರ ಕಂಪೆನಿಯಲ್ಲಿ 2 ನಿರ್ದೇಶಕರಿದ್ದು, 40 ಜನರಿಗೆ ಉದ್ಯೋಗ ನೀಡಲಾಗುತ್ತದೆ. ಇದೀಗ ಇದರಿಂದ ಪ್ರೇರಣೆಗೊಂಡು ಭಾರತೀಯರು ಇನ್ನೂ ತಮ್ಮ ನೆಚ್ಚಿನ ಆಹಾರವನ್ನು ಹುಡುಕಲಾಗದ ಅನೇಕ ದೇಶಗಳಲ್ಲಿ ಶಾಖೆಯನ್ನು ವಿಸ್ತರಿಸುವ ಯೋಜನೆ ಇವರಿಗಿದೆ. ಕಾರ್ತಿಕ್ ಅಮೈ