ಸಸಿಹಿತ್ಲು/ಉಪ್ಪುಂದ: ಸಸಿಹಿತ್ಲು ಬಳಿಯ ಅಗ್ಗಿದ ಕಳಿಯದಲ್ಲಿ ಈಜಲೆಂದು ಸಮುದ್ರಕ್ಕಿಳಿದ ಇಬ್ಬರು ಸಮುದ್ರ ಪಾಲಾದರೆ, ಮರವಂತೆ ಸಮುದ್ರ ತೀರದಲ್ಲಿದ್ದ ವ್ಯಕ್ತಿಯೋರ್ವ ಅಲೆಗಳ ಹೊಡೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ರವಿವಾರ ಸಂಭವಿಸಿದೆ.
ಬಜಪೆಯ ಸಿದ್ಧಾರ್ಥ ನಗರದ ಸುಜಿತ್ (32), ಕಾವೂರು ನಿವಾಸಿ ಗುರುಪ್ರಸಾದ್ (28) ಅಗ್ಗಿದಕಳಿಯದಲ್ಲಿ ನಾಪತ್ತೆಯಾದವರು. ಬಜಪೆಯ ಸೃಜನ್ ಹಾಗೂ ಕಾರ್ತಿಕ್ ಅವರನ್ನು ಸ್ಥಳೀಯರು ಹಾಗೂ ಅವರೊಂದಿಗೆ ಇದ್ದ ಇತರರು ರಕ್ಷಿಸಿದ್ದಾರೆ. ಸೃಜನ್ ತೀವ್ರ ಅಸ್ವಸ್ಥನಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಸಿಹಿತ್ಲಿನ ಅಗ್ಗಿದಕಳಿಯದ ಬಾಕಿಮಾರು ಗದ್ದೆಯಲ್ಲಿ ಸ್ಥಳೀಯ ಸಂಸ್ಥೆಯೊಂದು ನಡೆಸುತ್ತಿದ್ದ ಗ್ರಾಮದ ಗೌಜಿ ಉತ್ಸವದ ಕೆಸರು ಗದ್ದೆ ಕ್ರೀಡೋತ್ಸವದಲ್ಲಿ ಭಾಗಿಯಾಗಲು ಬಜಪೆ ಯುವ ಟೈಗರ್ ತಂಡದ 7 ಮಂದಿ ಆಗಮಿಸಿದ್ದರು. ಸ್ಪರ್ಧೆಯ ಮೊದಲ ಸುತ್ತಿನಲ್ಲಿಯೇ ಪರಾಜಯಗೊಂಡಿದ್ದರಿಂದ ತಂಡದ ನಾಲ್ವರು ಸದಸ್ಯರು ಕಡಲ ತಡಿಗೆ ಬಂದು ಈಜಾಡಲಾರಂಭಿಸಿದ್ದರು. ಸ್ಥಳೀಯರ ಎಚ್ಚರಿಕೆ ಲೆಕ್ಕಿಸದೆ ನೀರಾಟ ಮುಂದುವರಿಸಿದಾಗ ಅಲೆಗಳಲ್ಲಿ ಸಿಲುಕಿಕೊಂ ಡರು. ಸ್ಥಳೀಯರು ಇಬ್ಬರನ್ನು ರಕ್ಷಿಸು ವಲ್ಲಿ ಯಶಸ್ವಿಯಾದರೂ ಇನ್ನಿಬ್ಬರು ತೆರೆಗಳಲ್ಲಿ ಮರೆಯಾದರು. ಸ್ಥಳದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದು ಸುರತ್ಕಲ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಮರವಂತೆ: ಅಲೆಗೆ ಸಿಲುಕಿ ವ್ಯಕ್ತಿ ಸಾವು
ಉಪ್ಪುಂದ: ಮರವಂತೆ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನದ ಸಮೀಪ ಸಮುದ್ರ ದಡದಲ್ಲಿ ನಿಂತಿದ್ದ ವ್ಯಕ್ತಿಯೋರ್ವರು ಅಲೆಗಳ ರಭಸಕ್ಕೆ ಕೊಚ್ಚಿ ಹೋಗಿ ಮೃತಪಟ್ಟ ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ.
ಮಾರಣಕಟ್ಟೆಯ ಚಿತ್ತೂರು ನಿವಾಸಿ ಚೇತನ್ ಶೆಟ್ಟಿ (43) ಮೃತಪಟ್ಟ ವ್ಯಕ್ತಿ. ಅವರು ಪತ್ನಿ ಮತ್ತು 5 ವರ್ಷದ ಮಗುವನ್ನು ಅಗಲಿದ್ದಾರೆ.
ಈ ಸಂದರ್ಭ ಪರಿಸರದಲ್ಲಿ ಹಲವರು ಇದ್ದರೂ ಸ್ಥಳದಲ್ಲಿ ಆಳ ಇರುವುದರಿಂದ ರಕ್ಷಿಸಲು ಸಾಧ್ಯವಾಗಲಿಲ್ಲ. ಸ್ವಲ್ಪ ಸಮಯದ ಬಳಿಕ ಅದೇ ಸ್ಥಳದಲ್ಲಿ ಶವ ಕಂಡುಬಂದಿತು. ಪೊಲೀಸರು ಸಾರ್ವಜನಿಕರ ಸಹಕಾರದಿಂದ ಮೇಲೆತ್ತಲು ಪ್ರಯತ್ನಿಸಿ ಆಗಲೂ ವಿಫಲರಾದರು. ಸಮುದ್ರದ ಆರ್ಭಟ ಹೆಚ್ಚಾಗಿದ್ದರಿಂದ ನೀರಿಗಿಳಿಯುವ ಸಾಹಸವನ್ನು ಯಾರೂ ಮಾಡಲಿಲ್ಲ. ಸಂಜೆ 4 ಗಂಟೆ ಸುಮಾರಿಗೆ ಮೃತ ದೇಹ ಕಲ್ಲುಗಳೆಡೆಯಲ್ಲಿ ಸಿಲುಕಿಕೊಂಡಿದ್ದು ಶವವನ್ನು ಮೇಲೆತ್ತಲಾಯಿತು. ದೇಹ ಕಲ್ಲಿಗೆ ಬಡಿದ ಕಾರಣ ಮುಖದ ಒಂದು ಭಾಗ ಜಜ್ಜಿ ಹೋಗಿದೆ.
ಶವವನ್ನು ಕುಂದಾಪುರ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವರು ಇದನ್ನು ವಿಡಿಯೋ ಮಾಡಿದ್ದು ವ್ಯಕ್ತಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ.