Advertisement

ಒಬ್ಬಳೇ ಗರ್ಭಿಣಿಗೆ ಎರಡು ರಕ್ತದ ಗುಂಪು..!

05:36 PM Mar 14, 2021 | Team Udayavani |

ವಿಜಯಪುರ: ಹೆರಿಗೆ ಪೂರ್ವದಲ್ಲಿ ಪರೀಕ್ಷೆಗೆ ಬಂದಿದ್ದ ಗರ್ಭಿಣಿಗೆ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಪ್ರಯೋಗಾಲದಲ್ಲಿ ಎರಡು ರೀತಿಯ ರಕ್ತದ ಗುಂಪು ಪತ್ತೆ ಮಾಡಿ ವರದಿ ನೀಡಿದ್ದಾರೆ. ಸಿಬ್ಬಂದಿ ಯಡವಟ್ಟಿನಿಂದಾದ ಈ ಅಚಾತುರ್ಯದ ಕುರಿತು ಜಿಲ್ಲಾ ಆಸ್ಪತ್ರೆ ಸರ್ಜನ್‌ ತನಿಖೆ ನಡೆಸಲು ಮುಂದಾಗಿದ್ದಾರೆ.

Advertisement

ಲೋಣಿ ಬಿಕೆ ಗ್ರಾಮದ ಗರ್ಭಿಣಿ ವಿಜಯಲಕ್ಷ್ಮೀ ಎಂಬವರು ಹೆರಿಗೆ ಪೂರ್ವದಲ್ಲಿ ವೈದ್ಯಕೀಯ ಪರೀಕ್ಷೆಗಾಗಿ ವಿಜಯಪುರ ನಗರದಲ್ಲಿರುವ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಬಂದಿದ್ದಾರೆ. ಈ ಹಂತದಲ್ಲಿ ಫೆ. 21ರಂದು ಗರ್ಭಿಣಿಯ ರಕ್ತದ ಗುಂಪು ಪರೀಕ್ಷೆ ಮಾಡಿದ್ದು ಸರ್ಕಾರಿ ಆಸ್ಪತ್ರೆ ಪ್ರಯೋಗಾಲಯದ ಸಿಬ್ಬಂದಿ ಎ+ ಎಂದು ವರದಿ ನೀಡಿದ್ದಾರೆ. ಸದರಿ ಮಹಿಳೆ ಮಾ. 11ರಂದು ಸರ್ಕಾರಿ ಆಸ್ಪತ್ರೆಗೆ ಪರೀಕ್ಷೆಗೆ ಬಂದಾಗ ಮತ್ತೆ ರಕ್ತದ ಗುಂಪು ಪರೀಕ್ಷೆ ಮಾಡಿಸಲು ಸೂಚಿಸಿದ್ದಾರೆ. ಮೊದಲು ಪರೀಕ್ಷಿಸಲಾಗಿದೆ ಎಂದರೂ ಮತ್ತೆ ರಕ್ತದ ಪರೀಕ್ಷೆ ಮಾಡಿಸಿದ್ದಾರೆ. ಆದರೆ ಈ ಬಾರಿ ಸದರಿ ಮಹಿಳೆಯ ರಕ್ತದ ಮಾದರಿ ಬಿ+ ಎಂದು ಪ್ರಯೋಗಾಲಯದ ಸಿಬ್ಬಂದಿ ವರದಿ ನೀಡಿದ್ದಾರೆ. ಅಲ್ಲದೇ ಬಿ+ ರಕ್ತ ತರುವಂತೆ ಸೂಚಿಸಿದ್ದಾರೆ.  ಇದರದಿಂದ ಆತಂಕಗೊಂಡ ಗರ್ಭಿಣಿಯ ಕುಟುಂಬದವರು ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯದ ಸಿಬ್ಬಂದಿ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಒಂದು ತಿಂಗಳ ಅಂತರದಲ್ಲಿ ತನ್ನ ಪತ್ನಿಗೆ ಸರ್ಕಾರಿ ಆಸ್ಪತ್ರೆಯ ಒಂದೇ ಪ್ರಯೋಗಾಲಯದಲ್ಲಿ ಎರಡು ರೀತಿ ರಕ್ತದ ಗುಂಪು ಎಂದು ವರದಿ ನೀಡಿದ್ದಾರೆ ಎಂದು ಗರ್ಭಿಣಿಯ ಪತಿ ಶ್ರೀಶೈಲ ಬಂಡರಕೋಟಿ ಸರ್ಕಾರಿ ಆಸ್ಪತ್ರೆಯ ಪ್ರಯೋಗಾಲಯದ ಸಿಬ್ಬಂದಿ ಬೇಜವಾಬ್ದಾರಿ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಈ ಕುರಿತು ಸರ್ಕಾರಿ ಆಸ್ಪತ್ರೆಯ ವೈದ್ಯರು ಹಾಗೂ ಪ್ರಯೋಗಾಲಯದ ಸಿಬ್ಬಂದಿ ವರ್ತನೆಯನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಅಸ್ಪತ್ರೆಯ ಸರ್ಜನ್‌ ಡಾ| ಶರಣಪ್ಪ ಕಟ್ಟಿ, ಕೂಡಲೇ ಪ್ರಯೋಗಾಲಯದ ಮುಖ್ಯಸ್ಥರನ್ನು ಕರೆಸಿ ಪ್ರಾಥಮಿಕ ಹಂತದ ವಿವರ ಪಡೆದಿದ್ದಾರೆ.

ಅಲ್ಲದೇ ಪ್ರಯೋಗಾಲಯದ ಪ್ರಮುಖ ಡಾ| ಗುಂಡಳ್ಳಿ ಅವರನ್ನು ಕರೆಸಿ (ಮಾ. 13) ಇಂದು ಸದರಿ ಗರ್ಭಿಣಿಯ ರಕ್ತದ ಮಾದರಿ ಪಡೆದು ಪರೀಕ್ಷಿಸಿದಾಗ ಬಿ+ ಎಂದು ದೃಢಪಟ್ಟಿದೆ. ತಮ್ಮ ಸಿಬ್ಬಂದಿಯಿಂದ ಕರ್ತವ್ಯ ಲೋಪ ಆಗಿದ್ದು ತಿಳಿಯುತ್ತಲೇ ಪ್ರಯೋಗಾಲಯದ ಮುಖ್ಯಸ್ಥ ಡಾ| ಶಿವಾನಂದ ಅವರಿಗೆ ಕರ್ತವ್ಯ ಲೋಪ ಎಸಗಿದ ಸಿಬ್ಬಂದಿಗೆ ನೋಟಿಸ್‌ ಜಾರಿ ಮಾಡುವಂತೆ ಸೂಚಿಸಿದ್ದಾರೆ.  ಹೀಗಾಗಿ ಮೊದಲ ಎರಡು ಪರೀಕ್ಷೆಯ ವರದಿ ನೀಡುವಾಗ ಕರ್ತವ್ಯದಲ್ಲಿದ್ದ, ಮಾದರಿ ಪರೀಕ್ಷಿಸಿದ, ದಾಖಲೆಗಳಲ್ಲಿ ನಮೂದಿಸಿದ ಸಿಬ್ಬಂದಿ ವಿಚಾರಣೆ ನಡೆಸಲು ಮುಂದಾಗಿದೆ. ಇದಕ್ಕಾಗಿ ತ್ವರಿತ ವರದಿ ನೀಡುವಂತೆ ಜಿಲ್ಲಾ ಆಸ್ಪತ್ರೆಯ ಸರ್ಜನ್‌ ಅವರು ಡಾ| ಲಕ್ಕಣ್ಣವರ ನೇತೃತ್ವದಲ್ಲಿ ಸ್ತ್ರೀ ರೋಗ ತಜ್ಞರು, ಪ್ರಯೋಗಾಲಯದ ತಜ್ಞರನ್ನು ಒಳಗೊಂಡ ತನಿಖಾ ಸಮಿತಿ ನೇಮಿಸಿದ್ದಾರೆ.

ಎರಡನೇ ಶನಿವಾರ, ರವಿವಾರದ ರಜೆ ಇರುವ ಕಾರಣ ಸೋಮವಾರ ಕರ್ತವ್ಯ ಲೋಪ ಎಸಗಿದ ಆರೋಪಿತ ಸಿಬ್ಬಂದಿಗೆ ನೋಟಿಸ್‌ ನೀಡಿ, ವಿಚಾರಣೆ ನಡೆಸಲು ಸೂಚಿಸಲಾಗಿದೆ. ನಮ್ಮ ಸಿಬ್ಬಂದಿಯಿಂದ ಗಂಭೀರ ಲೋಪ ಆಗಿರುವುದು ನಿಜ. ಈ ಕುರಿತು ತನಿಖೆ ನಡೆಸಿ, ತಪ್ಪಿತಸ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸರ್ಕಾರಿ ಜಿಲ್ಲಾ ಆಸ್ಪತ್ರೆಯ ಸರ್ಜನ್‌ ಡಾ| ಶರಣಪ್ಪ ಕಟ್ಟಿ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next