Advertisement

ಮಲಪ್ರಭಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಬೈಕ್ ಸವಾರರ ರಕ್ಷಣೆ

10:28 AM Sep 09, 2019 | Hari Prasad |

ಗದಗ: ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ನೆರೆಯ ಪರಿಸ್ಥಿತಿ ತಲೆದೋರಿದೆ. ಪ್ರವಾಹದಿಂದ ಉಕ್ಕಿ ಹರಿಯುತ್ತಿರುವ ಮಲಪ್ರಭಾ ಪ್ರವಾಹದಲ್ಲಿ ಸಿಲುಕಿ ಕೊಚ್ಚಿಹೋಗುತ್ತಿದ್ದ ಇಬ್ಬರು ಬೈಕ್ ಸವಾರರನ್ನು ಜೆಸಿಬಿ ಸಹಾಯದಿಂದ ರಕ್ಷಿಸಲಾಗಿದೆ. ನರಗುಂದ ತಾಲೂಕಿನ ಕೊಣ್ಣೂರಿನಲ್ಲಿ ಈ ಘಟನೆ ನಡೆದಿದ್ದು ಜೆಸಿಬಿ ಚಾಲಕನ ಸಮಯ ಪ್ರಜ್ಞೆ ಈ ಇಬ್ಬರು ಯುವಕರ ಪ್ರಾಣವನ್ನು ಕಾಪಾಡುವಲ್ಲಿ ನೆರವಾಗಿದೆ.

Advertisement

ಬದಾಮಿ ಕಡೆಯಿಂದ ಕೊಣ್ಣೂರು ಗ್ರಾಮಕ್ಕೆ ಬೈಕ್‌ ನಲ್ಲಿ ಬರುತ್ತಿದ್ದ ಉಮೇಶ್ ಹಾಗೂ ಪ್ರವೀಣ ಎಂಬ ಯುವಕರು ಪ್ರವಾಹಕ್ಕೆ ತುಂಬಿ ಹರಿಯುತ್ತಿದ್ದ ನದಿಯನ್ನೂ ಲೆಕ್ಕಿಸದೇ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದರು. ಆದರೆ ಈ ಸಂದರ್ಭದಲ್ಲಿ ಇವರಿದ್ದ ಬೈಕ್ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರ ಸಹಿತ ನೀರಿನಲ್ಲಿ ಕೊಚ್ಚಿ ಹೋಗಲಾರಂಭಿಸಿದರು.


ಇದನ್ನು ಗಮನಿಸಿದ ಅಲ್ಲೇ ಇದ್ದ ಜೆಸಿಬಿ ಚಾಲಕ ಸದ್ದಾಂ, ಜೆಸಿಬಿಯ ಎದುರು ಬಾಗವನ್ನು ಬೈಕ್‌ ಗೆ ಅಡ್ಡಗಟ್ಟಿದ್ದಾರೆ. ಇದನ್ನು ಹಿಡಿದುಕೊಂಡು ಈ ಯುವಕರು ನೀರಿನಿಂದ ಮೇಲೆ ಬಂದಿದ್ದಾರೆ. ಈ ರಕ್ಷಣಾ ಕಾರ್ಯದಲ್ಲಿ ಜೆಸಿಬಿ ಚಾಲಕನಿಗೆ ಸ್ಥಳದಲ್ಲಿ ನೆರೆದಿದ್ದವರೂ ಸಹ ಕೈಜೋಡಿಸಿದರು. ಇವರೆಲ್ಲರ ಸಂಘಟಿತ ಪ್ರಯತ್ನದಿಂದಾಗಿ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕರನ್ನು ಬೈಕ್ ಸಮೇತ ದಡ ಸೇರಿಸಲಾಯಿತು. ಜೆಸಿಬಿ ಚಾಲಕ ಸದ್ದಾಂ ಅವರ ಸಮಯ ಪ್ರಜ್ಞೆ ಇದೀಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಮಲಪ್ರಭಾ ನದಿ ನೀರು ಸರಾಗವಾಗಿ ಹರಿಯುವಂತಾಗಲು ಕೊಣ್ಣೂರಿನ ಸೇತುವೆ ಮೇಲಿನ ಮಣ್ಣು ಕಸದ ರಾಶಿಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ಈ ಜಿಸಿಬಿ ತೊಡಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next