ಬೆಂಗಳೂರು: ಮಾಸ್ಟರ್ ಕೀ ಬಳಸಿ ಎಟಿಎಂ ಕೇಂದ್ರದಿಂದ ಹಣ ಕಳವು ಮಾಡುತ್ತಿದ್ದ ಇಬ್ಬರು ಖತರ್‍ನಾಕ್ ಕಳ್ಳರನ್ನು ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷ್ಮಣಮೂರ್ತಿ ನಗರದ ಸತೀಶ್ ಹಾಗೂ ರಾಮಮೂರ್ತಿನಗರ ಪಿ.ಸಿ.ಪಾಳ್ಯದ ಮಂಜುನಾಥ್ ಬಂಧಿತರು.
ಈಜೀಪುರದ ರೇಡಿಯಂ ಕ್ಯಾಶ್ ಮ್ಯಾನೇಜ್‌ಮೆಂಟ್ ಸರ್ವೀಸಸ್ ಕಂಪೆನಿಯ ಕಸ್ಟೋಡಿಯನ್ ಆಗಿದ್ದ ಆರೋಪಿಗಳು ನಗರದ ವಿವಿಧ ಭಾಗಗಳಲ್ಲಿ ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಸೇರಿದಂತೆ 20ಕ್ಕೂ ಹೆಚ್ಚು ಬ್ಯಾಂಕ್‌ಗಳ ಎಟಿಎಂಗಳಿಗೆ ಹಣ ತುಂಬುವ ಜವಾಬ್ದಾರಿ ವಹಿಸಿಕೊಂಡಿದ್ದರು.
ಹೀಗಾಗಿ ಇಬ್ಬರ ಬಳಿಯೂ ಎಟಿಎಂ ಕೇಂದ್ರದ ಮಾಸ್ಟರ್ ಕೀಗಳು, ಅಡ್ಮಿನ್ ಕಾರ್ಡ್, ಸೀಕ್ರೇಟ್ ನಂಬರ್‌ಗಳಿದ್ದವು. ಇದನ್ನೇ ದುರುಪಯೋಗಪಡಿಸಿಕೊಂಡ ಆರೋಪಿಗಳು ತಾವು ಹಗಲಿನಲ್ಲಿ ಎಟಿಎಂ ಕೇಂದ್ರಗಳಿಗೆ ತುಂಬುತ್ತಿದ್ದ ಹಣವನ್ನು ರಾತ್ರಿ ವೇಳೆ ಆಟೋ ಚಾಲಕ ಸುನೀಲ್‌ಕುಮಾರ್ ಸಹಾಯದಿಂದ ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಕ್ಕಿಬಿದ್ದಿದ್ದು ಹೇಗೆ?: ಫೆ.10ರಂದು ಸತೀಶ್ ಹಾಗೂ ಸುನೀಲ್‌ಕುಮಾರ್ ಕೊತ್ತನೂರಿನ ಗುಬ್ಬಿ ಕ್ರಾಸ್‌ನಲ್ಲಿರುವ ಎಟಿಎಂ ಬಳಿ ಆಟೋ ನಿಲ್ಲಿಸಿ ಒಳಗೆ ಎಟಿಎಂ ತೆರೆದು ಹಣ ಕಳವು ಮಾಡುತ್ತಿದ್ದಾಗ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ಇದನ್ನು ಗಮನಿಸಿ ಹತ್ತಿರ ಬಂದಾಗ ಆತಂಕಗೊಂಡ ಆರೋಪಿಗಳು ಆಟೋದಲ್ಲಿ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸಿದರು.
ಇದರಿಂದ ಅನುಮಾನಗೊಂಡ ಪೊಲೀಸರು ಆಟೋ ಬೆನ್ನಟ್ಟಿ ಅಡ್ಡಹಾಕಿ ಪರಿಶೀಲಿಸಿದಾಗ ಸೀಟಿನ ಹಿಂಬದಿಯಲ್ಲಿ ನೋಟಿನ ಕಂತೆಗಳು ಕಂಡುಬಂದಿದ್ದು, ಇದರಿಂದ ಅನುಮಾನ ಮತ್ತಷ್ಟು ಬಲಗೊಂಡು ಅವರಿಬ್ಬರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಿದಾಗ ಎಟಿಎಂನಲ್ಲಿ ಹಣ ಎಗರಿಸುತ್ತಿದ್ದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಅವರು ನೀಡಿದ ಮಾಹಿತಿ ಆಧರಿಸಿ ಮಂಜುನಾಥ್‌ನನ್ನೂ ಬಂಧಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.