Advertisement

ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 15.5 ಕಿಲೋ ಚಿನ್ನ ಸಹಿತ ಇಬ್ಬರ ಬಂಧನ

09:28 AM Feb 06, 2020 | Sriram |

ಕಾಸರಗೋಡು: ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 15.5 ಕಿಲೋ ಚಿನ್ನವನ್ನು ಕಾಸರಗೋಡು ಕಸ್ಟಂಸ್‌ ದಳ ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

Advertisement

ಕಣ್ಣೂರಿನಿಂದ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ಬಗ್ಗೆ ರಹಸ್ಯ ಮಾಹಿತಿ ಸಿಕ್ಕಿದ ಹಿನ್ನೆಲೆಯಲ್ಲಿ ಕಸ್ಟಂಸ್‌ ಸೂಪರಿಂಟೆಂಡೆಂಟ್‌ ಪಿ.ಪಿ. ರಾಜೀವನ್‌ ನೇತೃತ್ವದ ತಂಡ ಪಳ್ಳಿಕೆರೆ ಟೋಲ್‌ಬೂತ್‌ ಪರಿಸರದಲ್ಲಿ ಕಾದು ನಿಂತಿತ್ತು. ಆಗ ಕಣ್ಣೂರು ಭಾಗದಿಂದ ಬಂದ ಕಾರನ್ನು ತಂಡವು ತಮ್ಮ ವಾಹನವನ್ನು ಅಡ್ಡವಿರಿಸಿ ತಡೆಯಿತು. ಕಾರಲ್ಲಿದ್ದ ಇಬ್ಬರು ಪರಾರಿಯಾಗಲು ಯತ್ನಿಸಿದರಾದರೂ ಸಫ‌ಲರಾಗಲಿಲ್ಲ.

ಬಂಧಿತರನ್ನು ಮಹಾರಾಷ್ಟ್ರ ಸಾಂಗ್ಲಿ ಕಡಪಾಡಿ ನಿವಾಸಿಗಳಾದ ಖೇತನ್‌ (29) ಮತ್ತು ಆಕಾಶ್‌ (23) ಎಂದು ಗುರುತಿಸಲಾಗಿದೆ. ಅವರು ಬಳಸಿದ್ದ ಕಾರು ಮತ್ತು ಚಿನ್ನವನ್ನು ಕಾಸರಗೋಡಿನ ಪಿಲಿಕುಂಜೆಯಲ್ಲಿರುವ ಕಸ್ಟಂಸ್‌ ಕಚೇರಿಗೆ ಒಯ್ಯಲಾಯಿತು. ವಶಪಡಿಸಿಕೊಂಡ ಚಿನ್ನವು 5,79,70,000 ರೂ. ಮೌಲ್ಯದ್ದೆಂದು ಅಂದಾಜಿಸಲಾಗಿದೆ.

ಕಸ್ಟಂಸ್‌ ತಂಡ ಪರಿಶೀಲಿಸಿದಾಗ ಕಾರಿನ ಎದುರಿನ ಸೀಟಿನ ಅಡಿ ಭಾಗದಲ್ಲಿ ರಹಸ್ಯವಾಗಿ ನಿರ್ಮಿಸಲಾಗಿದ್ದ ಕವಾಟದೊಳಗೆ ಚಿನ್ನವನ್ನು ಕರಗಿಸಲ್ಪಟ್ಟ ರೂಪದಲ್ಲಿ ಬಚ್ಚಿಟ್ಟಿರುವುದು ಪತ್ತೆಯಾಯಿತು.

ಕಲ್ಲಿಕೋಟೆ ಕಸ್ಟಂಸ್‌ ಅಸಿಸ್ಟೆಂಟ್‌ ಕಮಿಷನರ್‌ ವಿಕಾಸ್‌ ಮತ್ತು ಮಧುಸೂದನ್‌ ಭಟ್‌ ಕಾಸರಗೋಡಿಗೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Advertisement

ಕಾಸರಗೋಡು ಕಸ್ಟಂಸ್‌ ತಂಡವು 2018ರಲ್ಲಿ ಕಾಸರಗೋಡಿನಲ್ಲಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ಒಂದೂವರೆ ಕಿಲೋ ಚಿನ್ನ ಮತ್ತು 1.20 ಲ.ರೂ. ಅನ್ನು ಪತ್ತೆ ಹಚ್ಚಿತ್ತು. ಆ ಬಳಿಕ ಅತಿ ದೊಡ್ಡ ಚಿನ್ನ ಬೇಟೆಯಾಗಿದೆ ಇದು.


ಕಾಸರಗೋಡು ಕಸ್ಟಂಸ್‌ ಪ್ರಿವೆಂಟಿವ್‌ ಯೂನಿಟ್‌ ಸೂಪರಿಂಟೆಂಡೆಂಟ್‌ ಪಿ.ಪಿ. ರಾಜೀವನ್‌, ಪಿ.ಪ್ರದೀಪ್‌ ಕುಮಾರ್‌ ನಂಬ್ಯಾರ್‌, ಪಿ.ಕೆ. ಹರಿದಾಸ್‌, ಕೆ. ರಾಘವನ್‌, ಇನ್‌ಸ್ಪೆಕ್ಟರ್‌ಗಳಾದ ಕಪಿಲ್‌ ಗರ್ಗ್‌, ಶ್ಯಾಂ ಕುಮಾರ್‌ ಶರ್ಮ, ಪ್ರಣೀತ್‌, ನಿಶಾಂತ್‌ ಠಾಕೂರ್‌, ಚಾಲಕ ಸಜಿತ್‌ ಕುಮಾರ್‌ ಕೆ.ವಿ., ಇತರರಾದ ಕೆ.ಆನಂದ, ಕೆ.ಚಂದ್ರಶೇಖರ, ಎಂ. ವಿಶ್ವನಾಥ ಮೊದಲಾದವರು ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next