ಬೆಂಗಳೂರು: ಜೆ.ಜೆ.ನಗರ ಹಾಗೂ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಇಬ್ಬರು ಆರೋಪಿಗಳನ್ನು ಪೊಲೀಸರು ಪೋಕ್ಸೋ ಕಾಯ್ದೆಯಡಿ ಬಂಧಿಸಿದ್ದಾರೆ.
ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಯನ್ನು ಜೆ.ಜೆ.ನಗರ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ರೋಷನ್ (40) ಬಂಧಿತ. ಆಟೋ ಮೊಬೈಲ್ ಅಂಗಡಿ ನಡೆಸುತ್ತಿರುವ ಮೊಹಮ್ಮದ್ ರೋಷನ್ ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಚಾಕೊಲೇಟ್ ಕೊಡಿಸುವುದಾಗಿ ಹೇಳಿ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ದೌರ್ಜನ್ಯವೆಸಗಿದ್ದಾನೆ.
ಇದರಿಂದ ಗಾಬರಿಗೊಂಡ ಬಾಲಕಿ ರಕ್ಷಣೆಗಾಗಿ ಕೂಗಿಕೊಂಡಿದ್ದು, ಇದನ್ನು ಕೇಳಿದ ಸ್ಥಳೀಯರು ಸ್ಥಳಕ್ಕೆ ತೆರಳಿದಾಗ ಆರೋಪಿ ಅಲ್ಲಿಂದ ಪರಾರಿಯಾಗಿದ್ದ. ಬಾಲಕಿಯನ್ನು ರಕ್ಷಿಸಿದ ಸ್ಥಳೀಯರು, ಪೊಲೀಸರಿಗೆ ಆರೋಪಿ ಕುರಿತು ಮಾಹಿತಿ ನೀಡಿದ್ದರು. ಅದರಂತೆ ಆರೋಪಿ ಮೊಹಮ್ಮದ್ ರೋಷನ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತ್ತೂಂದು ಪ್ರಕರಣದಲ್ಲಿ ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿದ್ಯಾರಣ್ಯಪುರ ನಿವಾಸಿ ಸುಹೇಲ್ (29) ಎಂಬಾತನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಆಟೋ ಚಾಲಕ ಸುಹೇಲ್ ಮತ್ತು ಸಂತ್ರಸ್ತೆ ಅಕ್ಕಪಕ್ಕದ ನಿವಾಸಿಗಳಾಗಿದ್ದು,
ಭಾನುವಾರ ಮನೆಯಿಂದ ಹೊರಗೆ ಬಂದ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದ. ಸ್ವಲ್ಪ ಹೊತ್ತಿನ ಬಳಿಕ ಬಾಲಕಿ ಮನೆಗೆ ಬಂದಿದ್ದು, ಪೋಷಕರು ವಿಚಾರಿಸಿದಾಗ ಸುಹೇಲ್‌ನ ಕೃತ್ಯವನ್ನು ತಿಳಿಸಿದ್ದಳು. ಅದರಂತೆ ಬಾಲಕಿಯ ಪೋಕರ್ ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದರು.