ಹುಣಸೂರು: ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘಿಸಿ ಗೋಮಾಂಸವನ್ನು ಸಾಗಿಸುತ್ತಿದ್ದ ಟಾಟಾಏಸ್ ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ತಾಲೂಕಿನ ದಲ್ಲಾಳು ಕೊಪ್ಪಲು ಬಳಿ ನಡೆದಿದೆ.
ತಾಲೂಕಿನ ಬಿಳಿಕೆರೆ ಠಾಣಾ ವ್ಯಾಪ್ತಿಯ ರತ್ನಪುರಿ ಗ್ರಾಮದ ನಯಾಜ್ ಪಾಷಾ, ಮುಬಾರಕ್ ಬಂಧಿತ ಆರೋಪಿಗಳು. ಟಾಟಾ ಏಸ್ ವಾಹನದಲ್ಲಿ ಸಾಗಿಸುತ್ತಿದ್ದ 650 ಕೆ.ಜಿ.ದನದ ಮಾಂಸ ಹಾಗೂ ಏಳು ಜಾನುವಾರುಗಳ ಕತ್ತರಿಸಿದ್ದ ತಲೆಗಳು ಹಾಗೂ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಬುಧವಾರ ಬೆಳಗಿನ ಜಾವ ರತ್ನಪುರಿಯಿಂದ ಬಿಳಿಕೆರೆ ಮಾರ್ಗ ಮೈಸೂರು ಕಡೆಗೆ ದನದ ಮಾಂಸವನ್ನು ಸಾಗಿಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿ ರವಿಪ್ರಸಾದ್ ಮಾರ್ಗದರ್ಶನದಲ್ಲಿ ಪೊಲೀಸರು ದಲ್ಲಾಳು ಬಳಿ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಮಾಂಸ ಹಾಗೂ ಕತ್ತರಿಸಿದ್ದ 7 ಜಾನುವಾರುಗಳ ತಲೆ ಪತ್ತೆಯಾಗಿದ್ದು. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಇದನ್ನೂ ಓದಿ:“ಗಂಗೆಯ ಮಗಳು”: ಗಂಗಾ ನದಿಯಲ್ಲಿ ಮರದ ಡಬ್ಬದಲ್ಲಿ ತೇಲಿ ಬಂತು ಹೆಣ್ಣು ಮಗು
ಹುಣಸೂರು ಉಪ ವಿಭಾಗಾಧಿಕಾರಿ ಬಿ.ಎನ್.ವೀಣಾರವರ ಆದೇಶದ ಮೇರೆಗೆ ಗೋಮಾಂಸವನ್ನು ಹೂಳಲಾಯಿತೆಂದು ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಬಿಳಿಕೆರೆ ಪೊಲೀಸ್ ನಿರೀಕ್ಷಕ ರವಿಕುಮಾರ್, ಎಸ್.ಐ.ರಾಮಚಂದ್ರನಾಯಕ, ಸಿಬ್ಬಂದಿಗಳಾದ ಚಂದ್ರು, ರವಿ, ಸತೀಶ, ನಂದೀಶ, ಮಹದೇವ್ ಭಾಗವಹಿಸಿದ್ದರು.