ಹುಣಸೂರು: ಸಾರಿಗೆ ನೌಕರರ ಪ್ರತಿಭಟನೆ ಇದೀಗ ಹಿಂಸಾಚಾರಕ್ಕೆ ತಿರುಗಿದೆ. ಪ್ರತಿಭಟನಾ ನಿರತರನ್ನು ಹತ್ತಿಕ್ಕಲು ಸರಕಾರ ಮುಂದಾಗುತ್ತಿದ್ದಂತೆ ನೌಕರರು ಸಹ ಬದಲಿ ಮಾರ್ಗದಲ್ಲಿ ಬಸ್ ತಡೆಯುವ ಪ್ರಯತ್ನಕ್ಕೆ ಮುಂದಾಗಿದ್ದು, ನೌಕರರ ಆಕ್ರೋಶಕ್ಕೆ ಐದು ಬಸ್ ಗಳ ಗಾಜು ಪುಡಿಯಾಗಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ.
ಹುಣಸೂರು- ಮೈಸೂರು ಮಾರ್ಗ ಮಧ್ಯೆ ರಂಗಯ್ಯನಕೊಪ್ಪಲು ಗೇಟ್ ಬಳಿ ಮೈಸೂರು ಕಡೆಗೆ ತೆರಳುತ್ತಿದ್ದ ಬಸ್ ಗೆ ಕಲ್ಲು ತೂರಿದ್ದರಿಂದ ಬಸ್ ನ ಹಿಂಬದಿಯ ಗಾಜು ಒಡೆದಿದೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಗೋಪಾಲಸ್ವಾಮಿ ಎಂಬುವವರ ತಲೆಗೆ ಗಾಯವಾಗಿದೆ.
ಇದನ್ನೂ ಓದಿ:ಸಂಧಾನವೊಂದೇ ಮಾರ್ಗ : ಉದಯವಾಣಿ ಸಮೀಕ್ಷೆಯಲ್ಲಿ ಜನಮತ
ಬಸ್ ಗೆ ಹಾನಿಯಾಗಿರುವ ಬಗ್ಗೆ ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಪೊಲೀಸರನ್ನು ಕಂಡ ಆರೋಪಿಗಳಾದ ಹುಣಸೂರು ಡಿಪೋದ ಮೆಕ್ಯಾನಿಕ್ ಗಳಾದ ಸಂತೋಷ್ ಭಜಂತ್ರಿ ಹಾಗೂ ಕೃಷ್ಣ ಮೂರ್ತಿ ಪೊಲೀಸರನ್ನು ಕಂಡು ಕಾಲಿಗೆ ಬುದ್ದಿ ಹೇಳಿದ್ದಾರೆ. ಬೆನ್ನಟ್ಟಿದ ಪೊಲೀಸರು ಆರೋಪಿಗಳನ್ನು ಅರಬ್ಬಿತಿಟ್ಟು ಅರಣ್ಯ ಪ್ರದೇಶದ ರಸ್ತೆಯಲ್ಲಿ ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಇದಲ್ಲದೆ ಗಾವಡಗೆರೆ, ಯಶೋಧರಪುರ ಹಾಗೂ ಬೋಳನಹಳ್ಳಿ ಬಳಿಯಲ್ಲಿ ತಲಾ ಒಂದು ಬಸ್ ಗೆ ಕಲ್ಲು ತೂರಿದ್ದಾರೆ. ಈ ಸಂಬಂಧ ಬಿಳಿಕೆರೆ ಹಾಗೂ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ನೈಟ್ ವಾಚ್‌ಮನ್ ಈಗ ಐಐಎಂ ಅಸಿಸ್ಟೆಂಟ್ ಪ್ರೊಫೆಸರ್!