ಮಹಾರಾಷ್ಟ್ರ: ಮೊಬೈಲ್ ಫೋನ್ ಅಂಗಡಿಗೆ, ಚಿನ್ನದ ಅಂಗಡಿಗೆ ಅಥವಾ ಬಟ್ಟೆ, ಎಲೆಕ್ಟ್ರಾನಿಕ್ ಅಂಗಡಿಗಳಿಗೆ ಕಳ್ಳರು ನುಗ್ಗಿ ಸಾವಿರಾರು ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದ ಪ್ರಕರಣಗಳನ್ನು ನಾವು ಕೇಳಿರುತ್ತೇವೆ. ಆದರೆ ಕಳೆದ ಕೆಲವು ದಿನಗಳಿಂದ ಕಳ್ಳರಿಗೆ ಇವೆಲ್ಲವುಗಳಿಂತಾ ಬೆಲೆ ಬಾಳುವ ವಸ್ತು ಸಿಕ್ಕಿದೆ. ಅದುವೇ ಈರುಳ್ಳಿ.
ಈರುಳ್ಳಿ ಬೆಲೆ ಹೆಚ್ಚಳವಾಗಿರುವುದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದಷ್ಟು ಜೋಕ್ ಗಳು, ಮೀಮ್ ಗಳು ಹರಿದಾಡುತ್ತಿವೆ. ಆದರೆ ಇಲ್ಲಿಬ್ಬರು ಕಳ್ಳರು ಬರೋಬ್ಬರಿ 110 ಕೆ.ಜಿ.ಗಳಷ್ಟು ಈರುಳ್ಳಿಯನ್ನು ಕದ್ದು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಮಹಾರಾಷ್ಟ್ರದ ಕಲ್ಯಾಣ್ ಎಪಿಎಂಸಿ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಇದೀಗ ಈರುಳ್ಳಿ ಕಳ್ಳರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರನ್ನು ಇಮ್ರಾನ್ ಸಯ್ಯದ್ ಹಾಗೂ ಝರೀದ್ ಶೇಖ್ ಎಂದು ಗುರುತಿಸಲಾಗಿದೆ.
ಸಗಟು ವ್ಯಾಪಾರಿ ಅಮಿತ್ ಗಣಪತ್ ಸಾರ್ವ್ ಗೌಡ್ ಎಂಬವರು ಶನಿವಾರದಂದು ತಾವು ಮನೆಗೆ ಹೋಗುವ ಮುಂಚೆ ಈರುಳ್ಳಿ ತುಂಬಿದ ಗೋಣಿಚೀಲಗಳನ್ನು ತಮ್ಮ ಅಂಗಡಿಯ ಹೊರಗಿಟ್ಟು ಹೋಗಿದ್ದರು. ಬಳಿಕ ಅವರು ಹಿಂತಿರುಗಿ ಬಂದ ಸಂದರ್ಭದಲ್ಲಿ ತಲಾ 55 ಕೆಜಿ ತೂಕದ ಎರಡು ಈರುಳ್ಳಿ ಗೋಣಿಗಳು ಕಾಣೆಯಾಗಿರುವುದು ಅವರ ಗಮನಕ್ಕೆ ಬಂದಿದೆ.
ತಕ್ಷಣವೇ ಅಮಿತ್ ಅವರು ಈರುಳ್ಳಿ ಕಳವಿನ ಮಾಹಿತಿಯನ್ನು ಪೊಲೀಸರಿಗೆ ತಿಳಿಸುತ್ತಾರೆ. ತಮಗೆ ಬಂದ ದೂರಿನ ಮೇಲೆ ಕೇಸು ದಾಖಲಿಸಿಕೊಂಡ ಪೊಲೀಸರು ಈರುಳ್ಳಿ ಕಳ್ಳರನ್ನು ಹಿಡಿಯಲು ಮುಂದಾಗುತ್ತಾರೆ. ಈ ಸಂದರ್ಭದಲ್ಲಿ ಒಂದು ಕ್ವಿಂಟಾಲ್ ಈರುಳ್ಳಿ ಎಗರಿಸಿದ ಕಳ್ಳರು ಪೊಲೀಸರ ಬಲೆಗೆ ಬೀಳುತ್ತಾರೆ.