ದಾವಣಗೆರೆ: ವಿವಿಧ ಕಡೆ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಇಬ್ಬರನ್ನು ಬಂಧಿಸಿ, ಒಟ್ಟು 655 ಗ್ರಾಂ ಗಾಂಜಾ ಸೊಪ್ಪು, ಮಾರಾಟಕ್ಕೆ ಬಳಸುತ್ತಿದ್ದ ಕಾರು, ಆ್ಯಕ್ಟಿವ್ ಹೋಂಡಾ ವಶಪಡಿಸಿಕೊಳ್ಳಲಾಗಿದೆ.
ದಾವಣಗೆರೆಯ ಆಂಜನೇಯ ಬಡಾವಣೆಯ 18ನೇ ಕ್ರಾಸ್‌ನಲ್ಲಿ ಅಕ್ವೇರಿಯಂ ಅಂಗಡಿಯ ಎಸ್.ಎ. ಪ್ರಮೋದ್ (28) ಎಂಬುವವನ್ನು ಬಂಧಿಸಿ, 15 ಸಾವಿರ ರೂ. ಮೌಲ್ಯದ 500 ಗ್ರಾಂ ಗಾಂಜಾ ಸೊಪ್ಪು ಮತ್ತು ಗಾಂಜಾ ಸಾಗಾಣೆಗೆ ಬಳಸುತ್ತಿದ್ದ ಟವೆರಾ ಕಾರು ವಶಪಡಿಸಿಕೊಳ್ಳಲಾಗಿದೆ. ಪ್ರಮೋದ್ ವಿರುದ್ಧ ಬಡಾವಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಆರ್. ಚೇತನ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಾಂಜಾ ಸೇವಿಸುತ್ತಿದ್ದಾಗ ಬಂಧನಕ್ಕೆ ಒಳಗಾಗಿದ್ದ ವೈದ್ಯಕೀಯ ವಿದ್ಯಾರ್ಥಿಗಳು ನೀಡಿದ ಮಾಹಿತಿ ಆಧರಿಸಿ ನಿಜಲಿಂಗಪ್ಪ ಬಡಾವಣೆಯ ಬಕ್ಕೇಶ್ವರ ಕಲ್ಯಾಣ ಮಂಟಪದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಪ್ರಮೋದ್‌ನನ್ನು ಸಿಇಎನ್ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ವಿ. ದೇವರಾಜ್ ಹಾಗೂ ಸಿಬ್ಬಂದಿಯವರಾದ ಪ್ರಕಾಶ್, ರವಿ, ಮಂಜುನಾಥ್, ಲೋಹಿತ್, ರಮೇಶ್, ವೀರಭದ್ರಪ್ಪ, ಈಶ್ವರಪ್ಪ, ಮಾರುತಿ, ನಾಗರಾಜ್, ದೇವರಾಜ್, ಸಚಿನ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಹರಿಹರದ ಅಮರಾವತಿ ಕಾಲೋನಿ ಬಸ್ ನಿಲ್ದಾಣದ ಬಳಿ ಆ್ಯಕ್ಟಿವ್ ಹೋಂಡಾದಲ್ಲಿ ಗಾಂಜಾ ಮಾರುತ್ತಿದ್ದ ಗುರುನಾಥ್ ಅಲಿಯಾಸ್ ಗುರು (34) ಎಂಬುವನನ್ನು ಹರಿಹರ ಗ್ರಾಮಾಂತರ ಪಿಎಸ್‌ಐ ಸಿದ್ದೇಗೌಡ ಮತ್ತವರ ಸಿಬ್ಬಂದಿ ಬಂಧಿಸಿದ್ದಾರೆ. ಹರ್ಲಾಪುರದಲ್ಲಿ ತರಕಾರಿ ಅಂಗಡಿ ನಡೆಸುತ್ತಿದ್ದ ಗುರುನಾಥ್ ಆ್ಯಕ್ಟಿವ್ ಹೋಂಡಾದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ. ಆತನಿಂದ 165 ಗ್ರಾಂ ಗಾಂಜಾದ 7 ಪ್ಯಾಕೆಟ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇಬ್ಬರು ಕಾಲೇಜು ವಿದ್ಯಾರ್ಥಿಗಳಿಗೇ ಗಾಂಜಾ ಮಾರಾಟ ಮಾಡುತ್ತಿದ್ದರು. ಬೇರೆ ಜಿಲ್ಲೆಗಳಿಂದ ಗಾಂಜಾ ತರಿಸಿಕೊಂಡು ಮಾರಾಟ ಮಾಡಲಾಗುತ್ತಿತ್ತು ಎಂಬ ಮಾಹಿತಿ ಇದೆ. ಗಾಂಜಾ ಮಾರಾಟದ ಹಿಂದೆ ಜಾಲವೂ ಇರಬಹುದು ಎಂಬ ಹಿನ್ನೆಲೆಯಲ್ಲೂ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಆರೋಪಿಗಳು, ವಿದ್ಯಾರ್ಥಿಗಳೊಂದಿಗೆ ಫೋನ್ ಮೂಲಕ ಸಂಪರ್ಕ ಸಾಧಿಸಿ, ಗಾಂಜಾ ಮಾರಾಟ ಮಾಡುತ್ತಿದ್ದರು. ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡುತ್ತಿದ್ದರು. ಕೆಲವಾರು ಕಾಲೇಜು ಆಡಳಿತ ಮಂಡಳಿ, ಶಿಕ್ಷಕರೊಂದಿಗೆ ಸಂಪರ್ಕದಲ್ಲಿದ್ದು, ಅವರ ಮಾಹಿತಿ ಆಧಾರದಲ್ಲೂ ಗಾಂಜಾ ಮಾರಾಟದ ಬಗ್ಗೆ ಎಲ್ಲಾ ಕಡೆಯಿಂದ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.
ಹೆಬ್ಟಾಳು ಟೋಲ್‌ಗೇಟ್ ಬಳಿ ನಡೆದಿದ್ದ ಬೆಳ್ಳಿ ದರೋಡೆಗೆ ಸಂಬಂಧಿಸಿದಂತೆ ಇಬ್ಬರನ್ನ ಬಂಧಿಸಲಾಗಿದೆ. ಇನ್ನುಳಿದವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಅತಿ ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪ್ರಶ್ನೆ ಯೊಂದಕ್ಕೆ ಉತ್ತರಿಸಿದರು. ಪ್ರೊಬೇಷನರಿ ಎಸ್ಪಿ ಶ್ರೀನಿವಾಸಲು, ಡಿಸಿಆರ್‌ಬಿ ಡಿವೈಎಸ್ಪಿ ಗೋಪಾಲಕೃಷ್ಣ ಗೌಡ, ಸಿಇಎನ್ ಪೊಲೀಸ್ ಇನ್ಸ್‌ಪೆಕ್ಟರ್ ಟಿ.ವಿ. ದೇವರಾಜ್, ಹರಿಹರ ಗ್ರಾಮಾಂತರ ಪಿಎಸ್‌ಐ ಸಿದ್ದೇಗೌಡ ಸುದ್ದಿಗೋಷ್ಠಿಯಲ್ಲಿದ್ದರು.