Advertisement
ತಾಯಿ ಗೌರಮ್ಮ, ಪತ್ನಿ ಉಷಾ, ಪುತ್ರಿ ಐಶ್ವರ್ಯ, ವ್ಯವಹಾರದ ಪಾಲುದಾರ ನಂದೀಶ್, ಧವನಂ ಜ್ಯುವೆಲರ್ ಮಾಲೀಕ ಹರೀಶ್ ಹಾಗೂ ವಿಧಾನಪರಿಷತ್ ಸದಸ್ಯ ರವಿ ಮತ್ತು ಕುಟಂಬ ಸದಸ್ಯರು ಸೇರಿ 15 ಮಂದಿ ಒಂದೇ ಬಾರಿಗೆ ಐಟಿ ವಿಚಾರಣೆಗೆ ಹಾಜರಾಗಿದ್ದರು. ಡಿ.ಕೆ.ಶಿವಕುಮಾರ್ ಕುಟುಂಬ ಸದಸ್ಯರಿಂದ ಮಾಹಿತಿ ಸಂಗ್ರಹಕ್ಕಾಗಿಯೇ ಪ್ರತ್ಯೇಕವಾಗಿ ಪ್ರಶ್ನಾವಳಿ ಸಿದ್ಧಪಡಿಸಿಕೊಂಡಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಅದರ ಪ್ರಕಾರ ಸುಮಾರು ಎರಡೂ ಕಾಲು ಗಂಟೆ ಕಾಲ ಸುದೀರ್ಘ ವಿಚಾರಣೆಗೊಳಪಡಿಸಿ ಮಾಹಿತಿ ಪಡೆದುಕೊಂಡರು.
Related Articles
Advertisement
ನನ್ನ ಬಾಯಿ ಮುಚ್ಚಿಸುವ ಸಲುವಾಗಿ ಅಧಿಕಾರಿಗಳು ಈ ಪ್ರಯತ್ನ ಮಾಡುತ್ತಿಲ್ಲ ಅನ್ನೋ ಭಾವನೆ ನನ್ನದು. ಕುಟುಂಬದವರನ್ನು ಕರೆಸಿ ಪ್ರತ್ಯೇಕವಾಗಿ ವಿಚಾರಣೆ ಮಾಡಿದ್ದಾರೆ. ನಾನು ಮತ್ತು ನನ್ನ ಕುಟುಂಬದವರು ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಸಹಕಾರ ನೀಡಿದ್ದೇವೆ. ಸಾಕಷ್ಟು ವಿಚಾರಣೆಗಳನ್ನು ನೋಡಿರುವ ನಾನು ತೆರೆದ ಪುಸ್ತಕವಿದ್ದಂತೆ ಎಂದರು.
ಹೆಚ್ಚುವರಿ ತನಿಖೆಗೆ ಸಹಕಾರ: ಪ್ರಕರಣವನ್ನು ಇಡಿ(ಜಾರಿ ನಿರ್ದೇಶನಾಲಯ) ಮತ್ತು ಸಿಬಿಐಗೆ ಕೊಡಬೇಕು ಎನ್ನುವುದಾದರೆ ಕೊಡಲಿ ನ್ಯಾಯಯುತವಾಗಿ ತನಿಖೆ ನಡೆಯುತ್ತೆ ಎನ್ನುವ ಭರವಸೆಯಿದೆ. ನಾನು ಯಾವುದಕ್ಕೂ ಭಯಪಡುವುದಿಲ್ಲ. ನಾನು ಮಂತ್ರಿಯಲ್ಲ ಸಾಮಾನ್ಯವಾಗಿ ವ್ಯಕ್ತಿಯಾಗಿ ವಿಚಾರಣೆಗೆ ಹಾಜರಾಗಿದ್ದೇನೆ ಎಂದು ತಿಳಿಸಿದರು.
ನನ್ನ ವ್ಯವಹಾರದ ಬದುಕು, ರಾಜಕೀಯ ಬದುಕು ಬೇರೆ ಬೇರೆ. ಯಾವುದಕ್ಕೂ ನಾನು ಹೆದರುವುದಿಲ್ಲ. ಐಟಿ ವ್ಯಾಪ್ತಿಯಲ್ಲಿ ಏನೇನು ಮಾಡಲೂ ಅವಕಾಶ ಇದೆಯೋ ಅದನ್ನೆಲ್ಲ ಮಾಡಲಿ. ಮತ್ತೆ ಮಂಗಳವಾರ ಕೂಡ ವಿಚಾರಣೆ ನಡೆಯಲಿದೆ. ಒಟ್ಟಾರೆ ನಾನು, ಕುಟುಂಬಸ್ಥರು ಸೇರಿ ಒಟ್ಟು 15 ಮಂದಿ ವಿಚಾರಣೆಗೆ ಹಾಜರಾಗಿದ್ದೆವು ಎಂದು ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.
ಈ ಮಧ್ಯೆ, ಪ್ರಕರಣ ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆಯಾಗಲಿದೆ ಎಂದು ಹೇಳಲಾಗುತ್ತಿದೆಯಾದರೂ ಈ ಬಗ್ಗೆ ಖಚಿತ ಮಾಹಿತಿ ತಿಳಿದು ಬಂದಿಲ್ಲ. ಆಗಸ್ಟ್ 2ರಂದು ಶಿವಕುಮಾರ್ ಮತ್ತು ಅವರ ಸಂಬಂಧಿಕರು, ಬೆಂಬಲಿಗರ ಕರ್ನಾಟಕ ಮತ್ತು ದೆಹಲಿಯಲ್ಲಿರುವ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಈ ವೇಳೆ ಅಪಾರ ಪ್ರಮಾಣ ಆಸ್ತಿ ದಾಖಲೆಗಳು ಪತ್ತೆಯಾಗಿದ್ದು, 350 ಕೋಟಿ ರೂ. ಅಘೋಷಿತ ಆಸ್ತಿ ಹೊಂದಿದ್ದಾರೆ ಎಂದು ಹೇಳಲಾಗಿತ್ತು.
ಈ ಹಿನ್ನೆಲೆಯಲ್ಲಿ ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಪರಿಷತ್ ಸದಸ್ಯ ರವಿ ಸೇರಿ ಕೆಲವರನ್ನು ಎರಡು ಬಾರಿ ವಿಚಾರಣೆ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಲೆಕ್ಕಪರಿಶೋಧಕರನ್ನು ಕರೆದೊಯ್ದು ಐಟಿ ಅಧಿಕಾರಿಗಳಿಗೆ ತಮ್ಮ ಆಸ್ತಿ ವಿವರ ಸಲ್ಲಿಸಿದ್ದರು. ಆದರೆ, ದಾಳಿ ವೇಳೆ ಪತ್ತೆಯಾದ ಆಸ್ತಿ ಪತ್ರಗಳಲ್ಲಿ ದೊರೆತಿರುವ ಎಲ್ಲ ಹೆಸರುಗಳ ವ್ಯಕ್ತಿಗಳನ್ನು ತನಿಖಾಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವಂತೆ ಐಟಿ ನೋಟಿಸ್ ನೀಡಿತ್ತು.ಎಫ್ಐಆರ್ ದಾಖಲಿಸುವ ಸಾಧ್ಯತೆ
ಆದಾಯಕ್ಕೂ ಮೀರಿದ ಆಸ್ತಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಐಟಿ ಇಲಾಖೆ ಅಧಿಕಾರಿಗಳು ಯಾವುದೇ ಸಮಯದಲ್ಲಿ ಎಫ್ಐಆರ್ ದಾಖಲಿಸಿ ಪ್ರಕರಣ ಇಡಿಗೆ ವರ್ಗಾವಣೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಆದರೆ, ಮಂಗಳವಾರ ವಿಚಾರಣೆ ಬಳಿಕ ಶಿವಕುಮಾರ್ ಸೇರಿ ಇಡೀ ಕುಟುಂಬ ಸದಸ್ಯರ ಹೇಳಿಕೆಯನ್ನಾಧರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳಿಂದ ಯಾರ್ಯಾರಿಗೆ ಯಾವ ಪ್ರಶ್ನೆ?
ಡಿ.ಕೆ.ಶಿವಕುಮಾರ್‌ಗೆ: ಇಡೀ ಕುಟುಂಬದಲ್ಲಿ ನೀವೊಬ್ಬರೇ ಸಂಪಾದನೆ ಮಾಡುತ್ತಿದ್ದು, ಒಬ್ಬರೇ ಇಷ್ಟೊಂದು ದೊಡ್ಡ ಮೊತ್ತದ ಆಸ್ತಿ ಸಂಪಾದಿಸಲು ಹೇಗೆ ಸಾಧ್ಯವಾಯಿತು. ಯಾವ ಇಸವಿಯಿಂದ ವ್ಯವಹಾರ ನಡೆಸುತ್ತಿದ್ದಿರಾ? ರಾಜಕೀಯ ಪ್ರವೇಶ ಯಾವಾಗ? ಆದಾಯದ ಮೂಲ ಯಾವುದು? ತಾಯಿ ಗೌರಮ್ಮಗೆ: ನಿಮ್ಮ ಪಿತ್ರಾರ್ಜಿತ ಆಸ್ತಿ ಎಷ್ಟು, ಈಗ ಎಲ್ಲೆಲ್ಲಿ ಆಸ್ತಿಗಳನ್ನು ಹೊಂದಿದ್ದೀರಿ? ಪತ್ನಿ ಉಷಾಗೆ: ಗ್ಲೋಬಲ್ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಮತ್ತು ಕಾಲೇಜು ಕಬೋರ್ಡ್‌ನಲ್ಲಿ ಪತ್ತೆಯಾದ ಹಣ ಮತ್ತು ನಿಮ್ಮ ಹೆಸರಿನಲ್ಲಿರುವ ಆಸ್ತಿಗಳು ಎಷ್ಟು? ಪುತ್ರಿ ಐಶ್ಚರ್ಯಗೆ: ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಬ್ಯಾಲೆನ್ಸ್ ಹಾಗೂ ನಿಮ್ಮ ಹೆಸರಿನಲ್ಲಿರುವ ಕನಕಪುರ ಜಮೀನು ಎಷ್ಟು? ರವಿಗೆ: ಶಿವಕುಮಾರ್ ಸಹಭಾಗಿತ್ವದಲ್ಲಿ ನಡೆಸುತ್ತಿರುವ ಉದ್ಯಮಗಳು, ಇತ್ತೀಚೆಗೆ ಖರೀದಿಸಿದ್ದ ಆಸ್ತಿಗಳ ಬಗ್ಗೆ ಮಾಹಿತಿ? ನಂದೀಶ್‌ಗೆ: ಗ್ಲೋಬಲ್ ಕಾಲೇಜು ಆಫ್ ಮ್ಯಾನೆಜ್‌ಮೆಂಟ್ ಕೇರ್ ಟೇಕರ್ ಆಗಿದ್ದೀರಿ. ಆದ್ದರಿಂದ ಕಾಲೇಜು ಆದಾಯ ಎಷ್ಟು? ಹರೀಶ್‌ಗೆ: ನಿಮ್ಮ ಸಂಸ್ಥೆಗೆಯಲ್ಲಿ ಶಿವಕುಮಾರ್ ಬಂಡವಾಳ ಹೂಡಿಕೆ ಎಷ್ಟು? ದಾಳಿ ವೇಳೆ ಶಿವಕುಮಾರ್ ಮನೆಯಲ್ಲಿ ಸಿಕ್ಕ ಚಿನ್ನಾಭರಣದ ಮಾಹಿತಿ ಸುನಿಲ್ ಶರ್ಮಾಗೆ: ಟ್ರಾನ್‌ಪೋರ್ಟ್ ವ್ಯವಹಾರದಲ್ಲಿ ಡಿಕೆಶಿ ಹೂಡಿಕೆ ಎಷ್ಟು? ಉಳಿದಂತೆ ಒಟ್ಟಾರೆ 15 ಮಂದಿಯನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.