Advertisement

ಹುಕ್ಕೇರಿ ಹಿರೇಮಠದಿಂದ ಎರಡು ಆಂಬ್ಯುಲೆನ್ಸ್‌  

09:52 PM May 22, 2021 | Team Udayavani |

ಬೆಳಗಾವಿ: ಕೊರೊನಾ ಸೋಂಕಿನಿಂದ ಇಡೀ ವಿಶ್ವವೇ ತಲ್ಲಣಗೊಂಡಿದೆ. ಆರ್ಥಿಕ ಪರಿಸ್ಥಿತಿಯೂ ಕುಸಿದಿದೆ. ಇಂತಹ ಸಂದರ್ಭದಲ್ಲಿ ಸದಾ ಸಮಾಜಮುಖೀ ಕೆಲಸ ಮಾಡಿಕೊಂಡು ಬರುತ್ತಿರುವ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಜಿಲ್ಲೆಗೆ ಎರಡು ಆಂಬ್ಯುಲೆನ್ಸ್‌ಗಳನ್ನು ನೀಡಿದ್ದು ಅವುಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ್‌ ಕಾರಜೋಳ ಹೇಳಿದರು.

Advertisement

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹುಕ್ಕೇರಿ ಹಿರೇಮಠದ ಪ್ರತಿಷ್ಠಾನದಿಂದ ಜಿಲ್ಲಾಡಳಿತಕ್ಕೆ ನೀಡಲಾದ ಆಂಬ್ಯುಲೆನ್ಸ್‌ಗೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕೊರೊನಾ ಸಂದರ್ಭದಲ್ಲಿ ಶ್ರೀಮಠದಿಂದ ನೀಡಿರುವ ಅಂಬ್ಯುಲೆನ್ಸ್‌ಗಳನ್ನು ಸಂಕಷ್ಟದಲ್ಲಿರುವ ಜನರನ್ನು ಆಸ್ಪತ್ರೆಗೆ ಕರೆ ತರಲು, ಕಳುಹಿಸಲು ಸದ್ಬಳಕೆ ಮಾಡಿಕೊಳ್ಳುವಂತೆ ಸೂಚಿಸಿದ್ದೇನೆ ಎಂದರು.

ರಾಜ್ಯ ಸರಕಾರದ ಕೇಂದ್ರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ ಮಾತನಾಡಿ, ಸದಾ ಸಮಾಜಮುಖೀಯಾಗಿ ಕೆಲಸ ಮಾಡುತ್ತಿರುವ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಬೆಳಗಾವಿ ಜಿಲ್ಲೆಗೆ ಆದರ್ಶವಾಗಿರುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಠದ ವತಿಯಿಂದ ಬೆಳಗಾವಿ ನಗರ ಹಾಗೂ ಹುಕ್ಕೇರಿ ತಾಲೂಕಿನ ಭಾಗದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತಕ್ಕೆ ಎರಡು ಆಂಬ್ಯೂಲೆನ್ಸ್‌ಗಳನ್ನು ನೀಡಲಾಗಿದೆ ಎಂದರು. ಕೋವಿಡ್‌-19 ಎರಡನೇ ಅಲೆ ಭೀಕರವಾಗಿದೆ. ಈ ಹಿನ್ನೆಲೆಯಲ್ಲಿ ಹುಕ್ಕೇರಿ ಹಿರೇಮಠದ ಗುರುಶಾಂತೇಶ್ವರ ಜಾತ್ರಾಮಹೋತ್ಸವವನ್ನು ಬಿಟ್ಟು ಜನರ ನೆರವಿಗೆ ಮುಂದಾಗುವ ಮೂಲಕ ಹೀಗೆಯೂ ಜನಸೇವೆ ಮಾಡಬಹುದು ಎಂಬುದು ನಮ್ಮ ಉದ್ದೇಶ ಎಂದರು.

ಹುಕ್ಕೇರಿ ಹಿರೇಮಠದಿಂದ ಕೊರೊನಾ ಮೊದಲನೇ ಅಲೆ ಸಂದರ್ಭದಲ್ಲಿ ಸುಮಾರು 12 ಲಕ್ಷ ರೂ. ಆಹಾರದ ಕಿಟ್‌ಗಳನ್ನು ಒದಗಿಸಲಾಗಿದೆ. ಪ್ರವಾಹದ ಸಂದರ್ಭದಲ್ಲಿಯೂ ಸಹ ಶ್ರೀಮಠ ಜನರ ಸೇವೆ ಮಾಡಿದೆ. ಈಗ ಹಳ್ಳಿಗಳಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಕಾರಣ ತಜ್ಞ ವೈದ್ಯರು ಹಳ್ಳಿ ಕಡೆ ಹೋಗಿ ಜನರ ಪ್ರಾಣ ಉಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಶಾಸಕ ಅನಿಲ್‌ ಬೆನಕೆ, ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ, ಎಸ್‌ಪಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಡಿಎಚ್‌ಓ ಶಶಿಕಾಂತ ಮುನ್ಯಾಳ, ಅರುಣ ಐಹೋಳೆ, ಬುಡಾ ಎಂಜಿನಿಯರ್‌ ಮಹಾಂತೇಶ ಹಿರೇಮಠ, ವೀರೇಶ ಹಿರೇಮಠ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next