ತುಮಕೂರು: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರಿಗೆ ಬೆದರಿಕೆ ಪತ್ರದೊಂದಿಗೆ ಸ್ಪೋಟಕ ವಸ್ತುಗಳಿದ್ದ ಪಾರ್ಸೆಲ್ ಕಳುಹಿಸಿದ್ದ ಆರೋಪಿಗಳನ್ನು ಸಿಸಿಬಿ ಪೋಲೀಸರು ಜಿಲ್ಲೆಯ ಹಾಗಲವಾಡಿ ಮತ್ತು ತಿಪಟೂರಿನಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ತಿಪಟೂರಿನ ರಾಜಶೇಖರ್ ಮತ್ತು ಹಾಗಲವಾಡಿಯ ವೇದಾಂತ್ ಎಂದು ಗುರುತಿಸಲಾಗಿದೆ. ಇದು ಮಾವನ ಆಸ್ತಿ ಕಬಳಿಸಲು ನಡೆಸಿದ ಸಂಚು ಎಂದು ಬಯಲಾಗಿದೆ.
ತಿಪಟೂರು ಮೂಲದವನಾದ ರಾಜಶೇಖರ್ ಗುಬ್ಬಿ ತಾಲೂಕಿನ ಹಾಗಲವಾಡಿಯ ಕುರಿಹಳ್ಳಿಯಲ್ಲಿ ಕಲ್ಪನಾ ಜೊತೆ ಮದುವೆ ಆಗಿದ್ದ. ರಾಜಶೇಖರ್ ಮಾವನ ಮನೆಯ ಆಸ್ತಿಗೋಸ್ಕರ ಕಲ್ಪನಾ ಮತ್ತು ಆಕೆಯ ತಂಗಿ ಭೂಮಿಕಾ ಇಬ್ಬರನ್ನೂ ಮದುವೆ ಆಗಬೇಕು ಎಂದು ಪ್ಲಾನ್ ಮಾಡಿದ್ದ. ಆದರೆ ಅದು ಫಲಿಸಲಿಲ್ಲ. ಕಲ್ಪನಾ ತಂಗಿ ಭೂಮಿಕಾ ಜೊತೆ ಅರಬೇಸಂದ್ರ ರಮೇಶ್ ಮದುವೆಯಾಗಿತ್ತು. ರಮೇಶನ ವಿರುದ್ದ ಪಿತೂರು ಮಾಡಲು ರಾಜಶೇಖರ ಹಾಗಲವಾಡಿ ಮೂಲದ ವೇದಾಂತನ ಸಹಾಯ ಪಡೆದು ಸಂಚು ರೂಪಿಸಿದ್ದ.
ಇದನ್ನೂ ಓದಿ:ನಟಿಯರಿಗೆ ಜಾಮೀನು ಕೊಡದಿದ್ದರೆ ಸ್ಫೋಟ, ಕೊಲೆ!; ನ್ಯಾಯಾಧೀಶರಿಗೇ ಡಿಟೋನೇಟರ್ ಇರಿಸಿ ಪತ್ರ
ಹೀಗಾಗಿ ವೇದಾಂತ್ ಜೊತೆ ಸೇರಿದ್ದ ರಾಜಶೇಖರ್, ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದ ಆರೋಪಿಗಳಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಜಾಮೀನು ನೀಡಬೇಕು, ಇಲ್ಲದಿದ್ದರೆ ಕೋರ್ಟ್ ಅನ್ನೇ ಸ್ಫೋಟಿಸುವುದಾಗಿ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದಾರೆ. ಅಷ್ಟೇ ಅಲ್ಲದೆ, ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರಕರಣದ ಎಲ್ಲ ಆರೋಪಿಗಳಿಗೂ ಜಾಮೀನು ನೀಡಬೇಕು ಎಂದು ಪತ್ರ ಬರೆದಿದ್ದು, ಎನ್‌ಡಿಪಿಎಸ್ ನ್ಯಾಯಾಲಯವನ್ನು ಸ್ಫೋಟಿಸುತ್ತೇನೆ ಎಂದು ಬೆದರಿಕೆ ಹಾಕಿ ನ್ಯಾಯಾಧೀಶ ಸೀನಪ್ಪ ಅವರಿಗೆ ಸ್ಫೋಟಕ ವಸ್ತು ಇರುವ ಪಾರ್ಸೆಲ್ ಕಳುಹಿಸಿದ್ದರು.
ಪತ್ರದ ಜೊತೆ ರಮೇಶ್ ನ ಆಧಾರ್ ಕಾರ್ಡ್ ಹಾಕಿದ್ದರು. ಇದರಿಂದ ಆರೋಪಿಗಳ ಪತ್ತೆಗೆ ಪೊಲೀಸರಿಗೆ ಪರೋಕ್ಷವಾಗಿ ಇವರೇ ಸಹಾಯ ಮಾಡಿದ್ದಾರೆ. ಸದ್ಯ ರಾಜಶೇಖರ್ ಮತ್ತ ವೇದಾಂತ್ ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಹಿಂದೆಯೂ ಸಿಕ್ಕಿಬಿದ್ದಿದ್ದ
ರಾಜಶೇಖರ್ ಅತ್ತೆಯ ಆಸ್ತಿಗಾಗಿ ಹತ್ತು ವರ್ಷಗಳಿಂದ ಅತ್ತೆ, ಹೆಂಡತಿ, ಮಾವ, ನಾದಿನಿಗೆ ಇನ್ನಿಲ್ಲದ ಚಿತ್ರಹಿಂಸೆ ನೀಡುತ್ತಿದ್ದ. ನಾಲ್ಕು ಎಕರೆ ಜಮೀನಿಗಾಗಿ ಮಾಡಿದ ಷಢ್ಯಂತ್ರ ಮಾಡಿದ್ದ ಎನ್ನಲಾಗದೆ. 2019ರಲ್ಲಿ ನಕಲಿ ಛಾಪ ಕಾಗದ ಸೃಷ್ಠಿ ಮಾಡಿ ರಮೇಶ ಹಾಗೂ ಮಾವನ ಮೇಲೆ ಆರೋಪ ಹೊರಿಸಿದ್ದ.
ಮಾವ ಬಸವಲಿಂಗಯ್ಯ ತನ್ನ ಮಗಳನ್ನೇ ಮಾರಾಟ ಮಾಡಿದ್ದಾರೆಂದು 2019ರಲ್ಲಿ ರಾಜೇಖರ್ ಆರೋಪ ಮಾಡಿದ್ದ. ಒಂದೂವರೆ ಲಕ್ಷಕ್ಕೆ ಮಗಳನ್ನು ಮಾರಾಟ ಮಾಡಿದ್ದಾರೆ ಎಂದು ನಕಲಿ ಚಾಪಕಾಗದ ಸೃಷ್ಟಿಸಿ ಮಾವ ಬಸವಲಿಂಗಯ್ಯ ಹಾಗೂ ರಮೇಶನ ಮೇಲೆ ಆರೋಪ ಹೊರಿಸಲು ನಾಟಕವಾಡಿದ್ದ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಿದ್ದ.
ಪ್ರಕರಣ ತನಿಖೆ ನಡೆಸಿದ್ದ ಚೇಳೂರು ಪೊಲೀಸರು ರಾಜಶೇಖರನಿಗೆ ಎಚ್ಚರಿಕೆ ನೀಡಿದ್ದರು. ಆದರೆ ಪೊಲೀಸರ ಎಚ್ಚರಿಕೆಯನ್ನ ಲಘುವಾಗಿ ಪರಿಗಣಿಸಿದ ರಾಜಶೇಖರ್ ಇದೀಗ ಇದೀಗ ಮತ್ತೊಮ್ಮೆ ನ್ಯಾಯಾಧೀಶರಿಗೆ ಬೆದರಿಕೆ ಪತ್ರ ಬರೆದು ಆತಂಕ ಸೃಷ್ಟಿಸಿ ಸಿಕ್ಕಿಬಿದ್ದಿದ್ದಾನೆ.