ಚಾಮರಾಜನಗರ: ಜಿಂಕೆ ಬೇಟೆಯಾಡಿ ಮಾಂಸ ಮಾರಾಟ ಮಾಡಿದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ತಾಲೂಕಿನ ಪುಣಜನೂರು ಬಳಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ದೊಡ್ಡ ಮೂಡಹಳ್ಳಿ ಗ್ರಾಮದ ನಂದೀಶ್ ನಾಯಕ (36), ಗೋಡೆಮಡುವಿನ ದೊಡ್ಡಿಯ ರಂಗಸ್ವಾಮಿ ಬಂಧಿತರು.
ಸೋಮವಾರ ರಾತ್ರಿ ಪುಣಜನೂರು ಅರಣ್ಯ ವಲಯ ಸಿಬ್ಬಂದಿಗೆ ಚುಕ್ಕೆ ಜಿಂಕೆ ಬೇಟೆ ಮತ್ತು ಮಾಂಸವನ್ನು ಹೊಂದಿರುವ ಬಗ್ಗೆ ಮಾಹಿತಿ ಸಿಕ್ಕಿತು. ದೊಡ್ಡ ಮೂಡಹಳ್ಳಿಯ ನಂದೀಶ್ ನಾಯಕನ ಮನೆಗೆ ದಾಳಿ ನಡೆಸಿದಾಗ ಜಿಂಕೆಯ ಮಾಂಸ ದೊರಕಿತು. ಈ ಜಿಂಕೆ ಮಾಂಸದ ಮೂಲದ ಬಗ್ಗೆ ಕೇಳಿದಾಗ ಗೋಡೆಮಡುವಿನ ದೊಡ್ಡಿಯ ರಂಗಸ್ವಾಮಿಯಿಂದ ಖರೀದಿಸಿದ್ದಾಗಿ ತಿಳಿಸಿದ್ದಾನೆ. ನಂತರ ರಂಗಸ್ವಾಮಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಇದನ್ನೂ ಓದಿ :ಕೋವಿಡ್ ವಿರುದ್ಧ ಹೋರಾಡಿ ಪೋಷಕರನ್ನು ಬದುಕಿಸಿಕೊಂಡ ನಟ ದುನಿಯಾ ವಿಜಯ್
ತಾನು ಗೋಡೆಮಡುವಿನದೊಡ್ಡಿಯ ಹಳ್ಳದ ಬಳಿ ಜಿಂಕೆಯನ್ನು ಬಲೆ ಬೀಸಿ ಹಿಡಿದು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಜಿಂಕೆ ಚರ್ಮ ಸುಟ್ಟು ಮಾಂಸವನ್ನು ನಂದೀಶ್‌ಗೆ ಮಾರಾಟ ಮಾಡಿದ್ದಾನೆ. ಇದಲ್ಲದೇ ಆತನ ಬಳಿ 3 ಕೆಜಿ ತೂಕದ ಆನೆದಂತವನ್ನೂ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ದಂತ ಕಾಡಿನಲ್ಲಿ ದೊರಕಿತೆಂದು ಆರೋಪಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ.
ಎಸಿಎಫ್ ಸಂದೀಪ್ ಸೂರ್ಯವಂಶಿ ಮತ್ತು ಆರ್‌ಎಫ್‌ಓ ಕಾಂತರಾಜ್ ಚವಾಣ್ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.