ಬೆಂಗಳೂರು: ಹಣಕಾಸಿನ ವಿಚಾರಕ್ಕೆ ರೌಡಿಶೀಟರ್ ನನ್ನು ಹತ್ಯೆಗೈಯಲು ಸಂಚು ರೂಪಿಸಿದ್ದ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿಯ ಎಚ್‌ಬಿಆರ್ ಲೇಔಟ್ ನಿವಾಸಿ ಮೊಹಮ್ಮದ್ ಜುಬೇರ್(37) ಮತ್ತು ಡಿ.ಜೆ. ಹಳ್ಳಿಯ ಡ್ರೈವರ್ಸ್ ಕಾಲೋನಿಯ ಫುರ್ಕಾನ್ ಅಲಿಖಾನ್ (38) ಬಂಧಿತರು. ಆರೋಪಿಗಳಿಂದ ಒಂದು ಕಂಟ್ರಿಮೇಡ್ ಪಿಸ್ತೂಲ್ ಮತ್ತು ಎರಡು ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಾಣಸವಾಡಿ ಠಾಣೆ ವ್ಯಾಪ್ತಿಯ ಚೇರ್ಮನ್ ಲೇಔಟ್ ಬಳಿ ಆರೋಪಿಗಳು ಅಕ್ರಮವಾಗಿ ಪಿಸ್ತೂಲ್ ಮತ್ತು ಗುಂಡುಗಳನ್ನು ಇಟ್ಟುಕೊಂಡು ಓಡಾಡುತ್ತಿರುವ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕೊಲೆಗೆ ಸಂಚು: ಆರೋಪಿಗಳ ಪೈಕಿ ಮೊಹಮ್ಮದ್ ಜುಬೇರ್ ಹಾಗೂ ರೌಡಿಶೀಟರ್ ಅನೀಸ್ ಆತ್ಮೀಯ ಸ್ನೇಹಿತರಾಗಿದ್ದರು. ಆದರೆ, 3 ವರ್ಷಗಳ ಹಿಂದೆ ಇಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಜಗಳವಾಗಿದ್ದು, ಪರಸ್ಪರ ದ್ವೇಷಿಸುತ್ತಿದ್ದರು. ಈ ಬೆನ್ನಲ್ಲೇ ಮೊಹಮ್ಮದ್ ಜುಬೇರ್, ಅನೀಸ್ ನಿಯಂತ್ರಣದಲ್ಲಿರುವ ಏರಿಯಾಗಳ ಕಂಟ್ರೋಲ್ ಮಾಡಲು ಮುಂದಾಗಿದ್ದ. ಈ ಮಧ್ಯೆ 2021ರಲ್ಲಿ ನಡೆದ ಅಲಿ ಎಂಬಾತನ ಕೊಲೆ ಪ್ರಕರಣದಲ್ಲಿ ಅನೀಸ್ ಕೈವಾಡ ಇತ್ತು. ಆತ ಜೈಲಿಗೂ ಹೋಗಿದ್ದ. ಹೀಗಾಗಿ ಅನೀಸ್‌ನನ್ನು ಕೊಲೆಗೈಯಲು ಮೊಹಮ್ಮದ್ ಜುಬೇರ್ ಸಂಚು ರೂಪಿಸಿದ್ದ. ಅದಕ್ಕೆ ಫುರ್ಕಾನ್ ಅಲಿಖಾನ್ ಕೂಡ ಸಹಕರಿಸಿದ್ದಾನೆ ಎಂಬುದು ಗೊತ್ತಾಗಿದೆ.
ಮಹಾರಾಷ್ಟ್ರದಲ್ಲಿ ಪಿಸ್ತೂಲ್ ಖರೀದಿ: ಆರೋಪಿಗಳು ಅನೀಸ್ ಹತ್ಯೆಗೆ ಒಂದು ತಿಂಗಳ ಹಿಂದೆಯೇ ಸಂಚು ರೂಪಿಸಿದ್ದು, ಮಹಾರಾಷ್ಟ್ರದ ಮುಂಬೈನಲ್ಲಿ ಕಂಟ್ರಿಮೆಡ್ ಪಿಸ್ತೂಲ್ ಮತ್ತು 2 ಜೀವಂತ ಗುಂಡುಗಳನ್ನು ಖರೀದಿಸಿದ್ದರು. ಇತ್ತೀಚೆಗೆ ಜೈಲಿನಿಂದ ಬಿಡುಗಡೆಯಾಗಿದ್ದ ಅನೀಸ್ ನ ಚಟುವಟಿಕೆಗಳು ಮತ್ತು ಆತನ ಸಹಚರರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಸೆ.12ರಂದು ಸಂಜೆ ಡಿ.ಜೆ.ಹಳ್ಳಿಯ ಚೇರ್ಮೆನ್ ಲೇಔಟ್ ಕಡೆ ಅನೀಸ್ ಬರುತ್ತಾನೆ ಎಂಬ ಮಾಹಿತಿ ಮೇರೆಗೆ ಪಿಸ್ತೂಲ್ ಮತ್ತು ಜೀವಂತ ಗುಂಡುಗಳ ಜತೆ ಕಾಯುತ್ತಿದ್ದರು.
ಈ ಮಾಹಿತಿ ಮೇರೆಗೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಠಾಣಾಧಿಕಾರಿ ಸಂತೋಷ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆನ ನಡೆದಿದೆ.