Advertisement

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೈವೇ: ದಿನಕ್ಕೆರಡು ಅಪಘಾತಗಳು; 2 ದಿನಕ್ಕೊಂದು ಸಾವು!

10:31 PM Jul 27, 2023 | Team Udayavani |

ಬೆಂಗಳೂರು: ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಪ್ರತಿ ದಿನ ಸರಾಸರಿ ಎರಡು ಅಪಘಾತಗಳಾಗುತ್ತಿದ್ದು, ಎರಡು ದಿನಕ್ಕೊಂದು ಸಾವು ಸಂಭವಿಸುತ್ತಿದೆ. ಈ ಮೂಲಕ ಅಕ್ಷರಶಃ ಉದ್ದೇಶಿತ ಮಾರ್ಗವು ವಾಹನ ಸವಾರರ ಪಾಲಿಗೆ “ಸಾವಿನ ರಹದಾರಿ’ಯಾಗುತ್ತಿದೆ!

Advertisement

ಜನವರಿಯಲ್ಲಿ ಉದ್ಘಾಟನೆಗೊಂಡ ಈ ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಏಳು ತಿಂಗಳಲ್ಲಿ 398 ಅಪಘಾತಗಳು ಸಂಭವಿಸಿ 121 ಜನ ಮೃತಪಟ್ಟಿದ್ದಾರೆ. ಈ ಪೈಕಿ ಪ್ಯಾಕೇಜ್‌ 1 (ಬೆಂಗಳೂರು- ನಿಡಗಟ್ಟ)ರಲ್ಲಿ 189 ಅಪಘಾತಗಳಲ್ಲಿ 59 ಸಾವು ಹಾಗೂ ಪ್ಯಾಕೇಜ್‌ 2 (ನಿಡಗಟ್ಟ- ಮೈಸೂರು)ರಲ್ಲಿ 209 ರಸ್ತೆ ಅಪಘಾತಗಳಿಂದ 62 ಜನ ಮೃತಪಟ್ಟಿದ್ದಾರೆ.

ಸ್ವತಃ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ನೀಡಿದ ಲಿಖೀತ ಮಾಹಿತಿ ಇದು. ಸಂಸದರಾದ ಸುಮಲತಾ ಅಂಬರೀಷ್‌ ಮತ್ತು ಪ್ರಜ್ವಲ್‌ ರೇವಣ್ಣ ಅವರು ಸಂಸತ್‌ನಲ್ಲಿ ಕೇಳಿದ ಚುಕ್ಕೆಗುರುತಿನ ಪ್ರಶ್ನೆಗೆ ಗುರುವಾರ ಸಚಿವಾಲಯ ನೀಡಿದ ಉತ್ತರದಲ್ಲಿ ಈ ಮಾಹಿತಿ ಲಭ್ಯವಾಗಿದೆ. ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ದೃಷ್ಟಿಯಿಂದ ಆಗಸ್ಟ್‌ 1ರಿಂದ ಉದ್ದೇಶಿತ ಮಾರ್ಗದಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳು, ಟ್ರ್ಯಾಕ್ಟರ್‌ ಸಹಿತ ನಿಧಾನಗತಿಯಲ್ಲಿ ಸಾಗುವ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಈಗಾಗಲೇ ಬೆಂಗಳೂರು- ಮೈಸೂರು ಎಕ್ಸೆಸ್‌ ಕಂಟ್ರೋಲ್ಡ್‌ ಕಮಿಟಿ ಕೂಡ ಸ್ಥಳಕ್ಕೆ ಭೇಟಿ ನೀಡಿ ಮೂರು ದಿನಗಳ ಕಾಲ ಪರಿಶೀಲನೆ ನಡೆಸಿದೆ ಎಂದು ಸಚಿವಾಲಯ ತಿಳಿಸಿದೆ.
ಮಾರ್ಗದುದ್ದಕ್ಕೂ ಮಾರ್ಗಸೂಚಿಗಳನ್ವಯ ಸೂಚನೆ ಫ‌ಲಕಗಳು, ಸಿಸಿ ಕೆಮರಾ ಅಳವಡಿಕೆ, ಜೀವರಕ್ಷಕ ಉಪಕರಣಗಳನ್ನು ಹೊಂದಿರುವ ಆ್ಯಂಬುಲನ್ಸ್‌, ಪ್ಯಾರಾಮೆಡಿಕಲ್‌ ಸಿಬಂದಿ ನಿಯೋಜನೆ ಮತ್ತಿತರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದ್ದಾರೆ.

ತುರ್ತು ಸಹಾಯ ಕೇಂದ್ರ ಆರಂಭ
ಈ ಮಧ್ಯೆ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿಯಲ್ಲಿ ಸೋಲಾರ್‌ ಆಧಾರಿತ ಜೀವರಕ್ಷಣೆಗೆ ಧಾವಿಸುವ ತುರ್ತು ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ. ಹೆದ್ದಾರಿ ಉದ್ದಕ್ಕೂ ಅಲ್ಲಲ್ಲಿ ಕಂಡುಬರುವ ಈ ಸೋಲಾರ್‌ ಆಧಾರಿತ ಹಳದಿ ಬಣ್ಣದ ಪೆಟ್ಟಿಗೆಗಳು ಅಪಘಾತದ ಸಂದರ್ಭದಲ್ಲಿ ನೆರವಿಗೆ ಬರಲಿವೆ. ಅಪಘಾತಕ್ಕೀಡಾದ ಸಂದರ್ಭದಲ್ಲಿ ಯಾರಾದರೂ ಈ ಪೆಟ್ಟಿಗೆ ತೆರೆದು ಕರೆ ಮಾಡಿ, ತುರ್ತು ನೆರವು ಪಡೆಯಬಹುದು. ಅಲ್ಲದೆ, ಹತ್ತಿರದ ಪೊಲೀಸ್‌ ಠಾಣೆಗೆ ಕರೆ ಮಾಡಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next