Advertisement

ಇಬ್ಬರು ಆಪ್‌ ಶಾಸಕರ ಬಂಧನ

12:26 PM Feb 22, 2018 | |

ಹೊಸದಿಲ್ಲಿ: ದಿಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಅನ್ಶ್‌ ಪ್ರಕಾಶ್‌ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಆಡಳಿತಾರೂಢ ಆಮ್‌ ಆದ್ಮಿ ಪಕ್ಷದ (ಆಪ್‌) ಇಬ್ಬರು ಶಾಸಕರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಓಕ್ಲಾ ಶಾಸಕ ಅಮಾನತುಲ್ಲಾ ಖಾನ್‌, ದೆಯೋಲ್‌ ಶಾಸಕ ಪ್ರಕಾಶ್‌ ಜಾರ್ವಲ್‌ ಬಂಧಿತರು.

Advertisement

 ಇವರಲ್ಲಿ, ಖಾನ್‌ ಅವರು ಬುಧವಾರ ಜಾಮಾ ನಗರ ಪೊಲೀಸ್‌ ಠಾಣೆಗೆ ಖುದ್ದಾಗಿ ಬಂದು ಶರಣಾಗಿದ್ದರೆ, ಪ್ರಕಾಶ್‌ ಜಾರ್ವಲ್‌ ಅವರನ್ನು ಮಂಗಳವಾರ ರಾತ್ರಿಯೇ ಬಂಧಿಸಲಾ ಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಬಂಧನದ ವೇಳೆ, ಸುದ್ದಿಗಾರರೊಂದಿಗೆ ಮಾತನಾಡಿದ ಖಾನ್‌, “ಮುಖ್ಯ ಕಾರ್ಯದರ್ಶಿ ಬಿಜೆಪಿಯ ಪ್ರತಿನಿಧಿಯಂತೆ ವರ್ತಿಸಿದ್ದಾರೆ. ದಿಲ್ಲಿ ಪೊಲೀಸರ ಮೇಲೆ ಕೇಂದ್ರ ಗೃಹ ಇಲಾಖೆಯ ಒತ್ತಡವಿದೆ. ಈ ಹಿಂದೆ, ನಮ್ಮ ಸಚಿವರೊಬ್ಬರ ಮೇಲೆ ಹಾಗೂ ಕಾರ್ಯಕರ್ತರ ಮೇಲೆಯೇ ಹಲ್ಲೆಗಳಾದಾಗ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ” ಎಂದು ಆರೋಪಿಸಿದರು.  

ಪೊಲೀಸರಿಗೆ ನಿರಾಸೆ: ಬಂಧಿತ ಆಪ್‌ ಶಾಸಕರನ್ನು ವಿಚಾರಣೆಗೆ ತಮ್ಮ ವಶಕ್ಕೆ 2 ದಿನಗಳ ಕಾಲ ಒಪ್ಪಿಸಬೇಕೆಂಬ ದಿಲ್ಲಿ ಪೊಲೀಸರ ಮನವಿಯನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ತಳ್ಳಿಹಾಕಿದೆ. ಬಂಧಿತರನ್ನು ಗುರುವಾರದವರೆಗೆ ತಿಹಾರ್‌ ಜೈಲಿನಲ್ಲಿ ನ್ಯಾಯಾಂಗ ವಶಕ್ಕೆ ನೀಡಿದೆ. ಗುರುವಾರ, ಈ ಇಬ್ಬರೂ ಶಾಸಕರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ.  

ಹೈಕೋರ್ಟ್‌ ನಕಾರ: ಪ್ರಕರಣದಲ್ಲಿ ತಾನು ಮಧ್ಯಪ್ರವೇಶ ಮಾಡುವಂತೆ ಕೋರಿ ಆಪ್‌ ವತಿಯಿಂದ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ದಿಲ್ಲಿ ಹೈಕೋರ್ಟ್‌ ತಿರಸ್ಕರಿಸಿದೆ. 

ಮನವಿ: ಪ್ರಕರಣದ ಬಗ್ಗೆ ಐಎಎಸ್‌ ಅಧಿಕಾರಿಗಳ ಸಂಘ ಹಾಗೂ ದಿಲ್ಲಿ ಮತ್ತು ಅಂಡಮಾನ್‌ ನಿಕೋಬಾರ್‌ ದ್ವೀಪಗಳ ಸಿವಿಲ್‌ ಸರ್ವೀಸಸ್‌ (ಡಿಎಎನ್‌ಐಸಿಎಸ್‌) ಸಂಘ, ರಾಷ್ಟ್ರಪತಿಗೆ ದೂರು ನೀಡಲು ನಿರ್ಧರಿಸಿದ್ದು ಅವರ ಭೇಟಿಗೆ ಮನವಿ ಮಾಡಿವೆ.

Advertisement

ಹಲ್ಲೆ ನಡೆದಿದ್ದು ನಿಜ 
ಅನ್ಶ್‌ ಪ್ರಕಾಶ್‌ ವೈದ್ಯಕೀಯ ಪರೀಕ್ಷಾ ವರದಿ ಅಧಿಕೃತವಾಗಿ ಬಿಡುಗಡೆಯಾಗಿದ್ದು, ಅವರ ಮೇಲಿನ ಹಲ್ಲೆ ಆರೋಪಕ್ಕೆ ಪುಷ್ಟಿ ನೀಡಿದೆ. ವರದಿಯಲ್ಲಿ, ಅನ್ಶ್‌ ಅವರ ಕುತ್ತಿಗೆ, ಬಲಗಣ್ಣಿನ ಮೇಲೆ ಹಲ್ಲೆಯ ಛಾಯೆ ಕಂಡು ಬಂದಿದ್ದು, ಕಿವಿಗಳ ಹಿಂಭಾಗ ಊದಿದ್ದು, ಕೆಳ ತುಟಿಯ ಬಲಭಾಗದಲ್ಲಿ  ಗಾಯ, ಅದರ ಕೆಳಗಿನ ದವಡೆಯೂ ಊದಿಕೊಂಡಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next