ಬೆಂಗಳೂರು:ಅಭಿವೃದ್ಧಿ ಮತ್ತು ಆಡಳಿತ ವಿಷಯಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿಗಳ ಟ್ವಿಟರ್ ವಾರ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಮ್ಮ ರಾಜ್ಯಕ್ಕೆ ಆಗಮಿಸುತ್ತಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ ಅವರಿಗೆ ಸ್ವಾಗತ. ನೀವು ನಮ್ಮ ರಾಜ್ಯದಿಂದ ಕಲಿಯೋದು ಸಾಕಷ್ಟಿದೆ. ನೀವು ಬೆಂಗಳೂರಿಗೆ ಭೇಟಿ ನೀಡಿದಾಗ ದಯವಿಟ್ಟು ಇಂದಿರಾ ಕ್ಯಾಂಟೀನ್ ಮತ್ತು ರೇಷನ್ ಅಂಗಡಿಗಳಿಗೆ ಭೇಟಿ ನೀಡಿ, ಇದರಿಂದ ಉತ್ತರಪ್ರದೇಶದಲ್ಲಿ ಹಸಿವಿನಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳಿಗೆ ಸಹಾಯಕವಾಗಬಹುದು ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದ್ದರು.
ಭಾನುವಾರ ಯೋಗಿ ಆದಿತ್ಯನಾಥ ಅವರು ರಾಜ್ಯ ಬಿಜೆಪಿ ಆಯೋಜಿಸಿದ್ದ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ರೀತಿ ಟ್ವೀಟ್ ಮಾಡಿದ್ದರು.
ಯೋಗಿ ಆದಿತ್ಯನಾಥ್ ಅವರು ಮೊದಲು ಉತ್ತರಪ್ರದೇಶದ ಜಂಗಲ್ ರಾಜ್ ಸರಿಮಾಡಲಿ, ಆಸ್ಪತ್ರೆಯಲ್ಲಿ ಸಾಯುತ್ತಿರುವ ಮಕ್ಕಳನ್ನು ಉಳಿಸಲಿ. ಆಮೇಲೆ ನಮಗೆ ಬುದ್ಧಿಹೇಳಲಿ ಎಂದು ಸಿಎಂ ತಿರುಗೇಟು ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರ ಟ್ವೀಟ್ ಗೆ ಯೋಗಿ ಆದಿತ್ಯನಾಥ ಟ್ವೀಟ್ ಮೂಲಕ ಈ ರೀತಿ ಟಾಂಗ್ ನೀಡಿದ್ದಾರೆ…ಸ್ವಾಗತ ಕೋರಿರುವುದಕ್ಕೆ ಧನ್ಯವಾದಗಳು ಸಿದ್ದರಾಮಯ್ಯಜೀಯವರೆ..ನಿಮ್ಮ ಆಡಳಿತಾವಧಿಯಲ್ಲಿಯೇ ಅತಿ ಹೆಚ್ಚು ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಕೇಳಿದ್ದೇನೆ. ಪ್ರಾಮಾಣಿಕ ಅಧಿಕಾರಿಗಳ ವರ್ಗಾವಣೆ ಹಾಗೂ ಸಾವಿನ ಪ್ರಕರಣಗಳನ್ನು ನಮೂದಿಸಬೇಡಿ. ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನಿಮ್ಮ ಮಿತ್ರಪಕ್ಷಗಳು ಮಾಡಿರುವ ಜಂಗಲ್ ರಾಜ್ ಕೊಳಕನ್ನು ಸ್ವಚ್ಚಗೊಳಿಸುವ ಕೆಲಸ ಮಾಡುತ್ತಿದ್ದೇನೆ ಎಂದು ತಿರುಗುಬಾಣ ಬಿಟ್ಟಿದ್ದಾರೆ.