ಲಕ್ನೋ: ಫ್ರಾನ್ಸ್ ನಲ್ಲಿ ಹಿಂಸಾಚಾರ, ಲೂಟಿ ಮುಂದುವರಿದಿರುವ ನಡುವೆಯೇ ಟ್ವೀಟರ್ ಬಳಕೆದಾರ ಪ್ರೊ.ಎನ್. ಜಾನ್ ಕ್ಯಾಮ್ ಎಂಬವರು, ಫ್ರಾನ್ಸ್ ನಲ್ಲಿನ ಹಿಂಸಾಚಾರವನ್ನು ನಿಯಂತ್ರಿಸಲು ಬಿಜೆಪಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಫ್ರಾನ್ಸ್ ಗೆ ಕಳುಹಿಸಬೇಕೆಂದು ಬೇಡಿಕೆ ಇಟ್ಟಿರುವ ಟ್ವೀಟ್ ವೈರಲ್ ಆಗಿದ್ದು, ಇದಕ್ಕೆ ಸಿಎಂ ಯೋಗಿ ಕಚೇರಿ ಪ್ರತಿಕ್ರಿಯೆ ನೀಡಿದೆ.
ಇದನ್ನೂ ಓದಿ:ತನ್ನ ಗ್ರಾಹಕರಿಗೆ ಚಾಕೋಲೆಟ್ ನೀಡಿ ಹುಟ್ಟುಹಬ್ಬ ಆಚರಿಸಿಕೊಂಡ ಝೊಮ್ಯಾಟೋ ಸಿಬ್ಬಂದಿ
“ಫ್ರಾನ್ಸ್ ನ ಹಿಂಸಾಚಾರವನ್ನು ನಿಯಂತ್ರಿಸಲು ಯೋಗಿ ಅವರನ್ನು ಕಳುಹಿಸಬೇಕು. ಅಲ್ಲಿ ನನ್ನ ದೇವರು ಕೇವಲ 24 ಗಂಟೆಯೊಳಗೆ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಿದ್ದಾರೆ” ಎಂದು ಪ್ರೊ. ಜಾನ್ ಟ್ವೀಟ್ ಮಾಡಿದ್ದರು.
“ಜಗತ್ತಿನ ಯಾವುದೇ ಭಾಗದಲ್ಲಾಗಲಿ ಯಾವಾಗ ಉಗ್ರವಾದವು ಗಲಭೆಗಳಿಗೆ ಉತ್ತೇಜನ ನೀಡುತ್ತದೋ ಆಗ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ. ಆ ಸಂದರ್ಭದಲ್ಲೆಲ್ಲಾ ಜಗತ್ತು ಯೋಗಿ ಮಾದರಿಯನ್ನೇ ಎದುರು ನೋಡುತ್ತದೆ. ಉತ್ತರಪ್ರದೇಶದಲ್ಲಿ ಮಹಾರಾಜ್ ಜೀ ಕಾನೂನು ಸುವ್ಯವಸ್ಥೆಯನ್ನು ಊರ್ಜಿತಗೊಳಿಸಿದ್ದಾರೆ” ಎಂದು ಉತ್ತರಪ್ರದೇಶ ಸಿಎಂ ಕಚೇರಿ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿತ್ತು.
ಯಾರೀತ ಪ್ರೊ.ಜಾನ್ ಕ್ಯಾಮ್?
ಪ್ರೊ.ಜಾನ್ ಕ್ಯಾಮ್ ಹೆಸರಿನ ಟ್ವೀಟ್ ಹಾಗೂ ಅದಕ್ಕೆ ಸಿಎಂ ಕಚೇರಿ ಪ್ರತಿಕ್ರಿಯೆ ನೀಡಿದ ನಂತರ ಸಾಮಾಜಿಕ ಜಾಲತಾಣ ಬಳಕೆದಾರರ ಗಮನಸೆಳೆದಿದ್ದು, ಸ್ವಯಂ ಘೋಷಿತ ಪ್ರೊ. ಜಾನ್ ಕ್ಯಾಮ್ ಬಗ್ಗೆ ಸಂಶಯ ವ್ಯಕ್ತಪಡಿಸಿ, ಈತ ಬೇರಾರು ಅಲ್ಲ ಡಾ.ನರೇಂದ್ರ ವಿಕ್ರಮಾದಿತ್ಯ ಯಾದವ್ ಎಂದು ನೆಟ್ಟಿಗರು ಸಂಶಯ ವ್ಯಕ್ತಪಡಿಸಿದ್ದಾರೆ.
ಬ್ರೌನ್ವಾಲ್ಡ್ ಆಸ್ಪತ್ರೆಗಳ ಸಮೂಹದ ಅಧ್ಯಕ್ಷ ಡಾ.ನರೇಂದ್ರ ವಿಕ್ರಮಾದಿತ್ಯ ಯಾದವ್ ಉದ್ಯೋಗಿಗಳಿಗೆ ವಂಚಿಸಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದು, ಪತ್ನಿ ದಿವ್ಯ ರಾವತ್ ನಾಪತ್ತೆಯಾಗಿದ್ದಳು ಎಂದು ಮತ್ತೊಬ್ಬ ಟ್ವೀಟರ್ ಬಳಕೆದಾರರು ದೂರಿದ್ದಾರೆ.
ಫ್ರಾನ್ಸ್ ನಲ್ಲಿ ಏನಾಗಿತ್ತು:
ಇತ್ತೀಚೆಗೆ ಫ್ರಾನ್ಸ್ ನಲ್ಲಿ ಪೊಲೀಸರ ಗುಂಡಿಗೆ 17 ವರ್ಷದ ಆಫ್ರಿಕಾದ ಅಲ್ಚೀರಿಯಾ ಮೂಲದ ಬಾಲಕ ಸಾವನ್ನಪ್ಪಿರುವುದನ್ನು ಖಂಡಿಸಿ ಹಿಂಸಾಚಾರ ನಡೆದಿತ್ತು. ನೂರಾರು ವಾಹನಗಳಿಗೆ ಆಫ್ರಿಕಾ ಮೂಲದ ಪ್ರೆಂಚ್ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದರು. ಕಳೆದ ನಾಲ್ಕೈದು ದಿನಗಳಿಂದಲೂ ಫ್ರಾನ್ಸ್ ನಲ್ಲಿ ಹಿಂಸಾಚಾರ, ಲೂಟಿ ಮುಂದುವರಿದಿದೆ.