Advertisement

“ಕೆಲಸ’ಕಿತ್ತುಕೊಂಡ ಟ್ವಿಟರ್‌! ಭಾರತ ಸೇರಿದಂತೆ ವಿಶ್ವಾದ್ಯಂತ 3,700 ಉದ್ಯೋಗಿಗಳು ವಜಾ

08:36 PM Nov 04, 2022 | Team Udayavani |

ವಾಷಿಂಗ್ಟನ್‌/ನವದೆಹಲಿ: “ನೀವೇನಾದರೂ ಕಚೇರಿಯತ್ತ ಹೊರಟಿದ್ದರೆ, ಮನೆಗೆ ವಾಪಸ್‌ ಹೋಗಿ…’

Advertisement

ಇದು ಎಲಾನ್‌ ಮಸ್ಕ್ ನೇತೃತ್ವದ ಟ್ವಿಟರ್‌ ಸಂಸ್ಥೆ ಭಾರತ, ಅಮೆರಿಕ, ಯು.ಕೆ. ಸೇರಿದಂತೆ ಜಗತ್ತಿನ ವಿವಿಧ ಮೂಲೆಗಳಲ್ಲಿರುವ ತನ್ನ ಸಾವಿರಾರು ಸಿಬ್ಬಂದಿಗೆ ನೀಡಿದ ಸೂಚನೆ!

ಮಸ್ಕ್ ಅವರು ಟ್ವಿಟರ್‌ನ ಮಾಲೀಕತ್ವ ಪಡೆದ ಬೆನ್ನಲ್ಲೇ, ಉದ್ಯೋಗಿಗಳನ್ನು ಸಾಮೂಹಿಕವಾಗಿ ವಜಾ ಮಾಡುವ ಪ್ರಕ್ರಿಯೆ ಆರಂಭಿಸಿದ್ದು, ಭಾರತದಲ್ಲಿದ್ದ ಇಡೀ ಮಾರ್ಕೆಟಿಂಗ್‌ ಮತ್ತು ಸಂವಹನ ವಿಭಾಗವನ್ನೇ ವಜಾ ಮಾಡಲಾಗಿದೆ. ಹಲವಾರು ಎಂಜಿನಿಯರ್‌ಗಳನ್ನೂ ಕೆಲಸದಿಂದ ತೆಗೆದುಹಾಕಲಾಗಿದೆ.

“ಕಿತ್ತುಹಾಕುವ ಕೆಲಸ ಆರಂಭವಾಗಿದೆ. ನನ್ನ ಅನೇಕ ಸಹೋದ್ಯೋಗಿಗಳಿಗೆ ಇಮೇಲ್‌ ಸಂದೇಶ ಬಂದಿದೆ’ ಎಂದು ಟ್ವಿಟರ್‌ ಇಂಡಿಯಾ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.

ಶುಕ್ರವಾರ ಯಾವುದೇ ಮುನ್ನೂಚನೆ ನೀಡದೆ ಜಾಗತಿಕವಾಗಿ 3,700 ಮಂದಿಯನ್ನು ಕೆಲಸದಿಂದ ಕಿತ್ತುಹಾಕಲಾಗಿದೆ. ಜತೆಗೆ, ಸಿಬ್ಬಂದಿ, ಟ್ವಿಟರ್‌ ಸಿಸ್ಟಂಗಳು ಮತ್ತು ಗ್ರಾಹಕರ ದತ್ತಾಂಶಗಳ ಸುರಕ್ಷತೆ ದೃಷ್ಟಿಯಿಂದ ಎಲ್ಲ ಕಚೇರಿಗಳನ್ನೂ ಸದ್ಯಕ್ಕೆ ಮುಚ್ಚುತ್ತಿದ್ದೇವೆ ಎಂದೂ ಕಂಪನಿ ಹೇಳಿದೆ.

Advertisement

ಯು.ಕೆ.ಯಲ್ಲಂತೂ ತಡರಾತ್ರಿ 3 ಗಂಟೆ ವೇಳೆ ಅನೇಕ ಉದ್ಯೋಗಿಗಳ ಲ್ಯಾಪ್‌ಟಾಪ್‌ನಲ್ಲಿ ಸ್ಲಾéಕ್‌ ಮತ್ತು ಜಿಮೇಲ್‌ ಪ್ರವೇಶಾವಕಾಶವನ್ನೇ ತೆಗೆದುಹಾಕಲಾಗಿದೆ. ಬೆಳಗ್ಗೆ ಎಚ್ಚರಗೊಂಡು, ಕೆಲಸ ಆರಂಭಿಸಲು ಮುಂದಾದಾಗ ಲ್ಯಾಪ್‌ಟಾಪ್‌ಗೆ ಆ್ಯಕ್ಸೆಸ್‌ ಸಿಗದೇ ಹಲವರು ಒದ್ದಾಡಿದ್ದಾರೆ. ನಂತರವೇ ಅವರಿಗೆ ತಮ್ಮನ್ನು ವಜಾ ಮಾಡಿರುವ ಅಂಶ ಗೊತ್ತಾಗಿದೆ.

ಯಾರ್ಯಾರನ್ನು ವಜಾ ಮಾಡಲಾಗಿದೆಯೋ ಅವರಿಗೆ ಅವರ ವೈಯಕ್ತಿಕ ಇಮೇಲ್‌ಗೆ ಸಂದೇಶ ರವಾನಿಸುತ್ತೇವೆ. ಯಾರು ಕಂಪನಿಯಲ್ಲೇ ಉಳಿಯಲಿದ್ದಾರೋ, ಅವರಿಗೆ ಟ್ವಿಟರ್‌ ಇಮೇಲ್‌ ಮೂಲಕ ನೋಟಿಫಿಕೇಷನ್‌ ಕಳುಹಿಸಲಾಗುತ್ತದೆ ಎಂದು ಕಂಪನಿ ಮಾಹಿತಿ ನೀಡಿದೆ.

ಈ ವಿಚಾರ ತಿಳಿಯುತ್ತಿದ್ದಂತೆ, ಎಲ್ಲ ಉದ್ಯೋಗಿಗಳೂ ಒಂದು ಕಡೆ ತಮ್ಮ ಪರ್ಸನಲ್‌ ಇಮೇಲ್‌, ಮತ್ತೂಂದು ಕಡೆ ಟ್ವಿಟರ್‌ ಮೇಲ್‌ ಅನ್ನು ತೆರೆದು ಆತಂಕ, ಗೊಂದಲದೊಂದಿಗೆ ಕಣ್ಣೀರಿಡುತ್ತಾ “ಸಂದೇಶ’ಕ್ಕಾಗಿ ಕಾಯುತ್ತಿದ್ದರು. ಕೆಲವು ಸಿಬ್ಬಂದಿ “ಒನ್‌ ಟೀಂ’ ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಕಂಪನಿಯಲ್ಲಿನ ತಮ್ಮ ಕೊನೇ ಕ್ಷಣಗಳನ್ನು, ಕೆಲಸ ಕಳೆದುಕೊಂಡ ನೋವನ್ನು, ಇಲ್ಲಿಯವರೆಗೆ ಸಿಕ್ಕಿರುವ ಅವಕಾಶಗಳನ್ನು ಹಂಚಿಕೊಂಡರು. ಶುಕ್ರವಾರ ಬೆಳಗ್ಗೆ ಟ್ವಿಟರ್‌ನ ಲಂಡನ್‌ ಪ್ರಧಾನ ಕಚೇರಿಯು ಸಿಬ್ಬಂದಿಯಿಲ್ಲದೇ ಭಣಗುಡುತ್ತಿತ್ತು.

ಕೋರ್ಟ್‌ನಲ್ಲಿ ದಾವೆ
ಟ್ವಿಟರ್‌ ಕಂಪನಿಯ ಅರ್ಧದಷ್ಟು ಉದ್ಯೋಗಿಗಳನ್ನು ಯಾವುದೇ ನೋಟಿಸ್‌ ಇಲ್ಲದೆ ವಜಾ ಮಾಡಿರುವುದನ್ನು ಪ್ರಶ್ನಿಸಿ ಸ್ಯಾನ್‌ಫ್ರಾನ್ಸಿಸ್ಕೋದ ಫೆಡರಲ್‌ ಕೋರ್ಟ್‌ನಲ್ಲಿ ದಾವೆ ಹೂಡಲಾಗಿದೆ. ಕ್ಯಾಲಿಫೋರ್ನಿಯಾ ಕಾನೂನು ಪ್ರಕಾರ, ದೊಡ್ಡ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕುವ 60 ದಿನಗಳ ಮುಂಚಿತವಾಗಿ ನೋಟಿಸ್‌ ನೀಡಬೇಕು. ಆದರೆ, ಟ್ವಿಟರ್‌ ಸಂಸ್ಥೆ ಈ ಕಾನೂನನ್ನು ಉಲ್ಲಂ ಸಿ, ಏಕಾಏಕಿ ಉದ್ಯೋಗಿಗಳನ್ನು ವಜಾ ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಹೈಪರ್‌ಲೂಪ್‌ ಸುರಂಗ ಧ್ವಂಸ
ಎಲಾನ್‌ ಮಸ್ಕ್ ಅವರ ಮಹತ್ವಾಕಾಂಕ್ಷಿ ಹೈಪರ್‌ಲೂಪ್‌ ತಂತ್ರಜ್ಞಾನ ಪ್ರಯೋಗಕ್ಕಾಗಿ ಕ್ಯಾಲಿಫೋರ್ನಿಯಾದಲ್ಲಿ ನಿರ್ಮಿಸಲಾಗಿದ್ದ ಮೊದಲ ಹೈಪರ್‌ಲೂಪ್‌ ಸುರಂಗವನ್ನು ಈಗ ಕೆಡವಿಹಾಕಲಾಗಿದೆ. ಒಂದು ಮೈಲು ಉದ್ದ ಮತ್ತು 12 ಅಡಿ ಅಗಲದ ಉಕ್ಕಿನ ಸುರಂಗವನ್ನು ಕ್ಯಾಲಿಫೋರ್ನಿಯಾದ ಸ್ಪೇಸ್‌ಎಕ್ಸ್‌ ಪ್ರಧಾನ ಕಚೇರಿ ಸಮೀಪವೇ ನಿರ್ಮಿಸಲಾಗಿತ್ತು. ದಿ ಬೋರಿಂಗ್‌ ಕಂಪನಿಯು ಈ ಸುರಂಗದಲ್ಲಿ ಪ್ರಾಯೋಗಿಕ ಪರೀಕ್ಷೆಯನ್ನೂ ನಡೆಸಿತ್ತು. ಹೈಪರ್‌ಲೂಪ್‌ ತಂತ್ರಜ್ಞಾನದ ಮೂಲಕ ಗಂಟೆಗೆ 965 ಕಿ.ಮೀ. ದೂರವನ್ನು ಕ್ರಮಿಸಬಹುದು ಎಂದೂ ಹೇಳಲಾಗಿತ್ತು. ಆದರೆ, ಇದ್ಯಾವುದೂ ಫ‌ಲ ಕೊಡದ ಕಾರಣ, ಯೋಜನೆಯನ್ನು ಕೈಬಿಡಲಾಗಿದೆ. ಅದರಂತೆ, ಸುರಂಗವನ್ನು ಧ್ವಂಸ ಮಾಡಲಾಗಿದ್ದು, ಇನ್ನು ಮುಂದೆ ಅದನ್ನು ಪಾರ್ಕಿಂಗ್‌ಗಾಗಿ ಮೀಸಲಿಡಲಾಗುತ್ತದೆ ಎಂದು ಹೇಳಲಾಗಿದೆ.

ಭಾರತದಲ್ಲಿ ಕೆಲ ಕಾಲ ಟ್ವಿಟರ್‌ ಡೌನ್‌
ಟ್ವಿಟರ್‌ ಕಂಪನಿಯಲ್ಲಿ ಹಲವು ಬದಲಾವಣೆಗಳು ನಡೆಯುತ್ತಿರುವ ಹೊತ್ತಲ್ಲೇ ಶುಕ್ರವಾರ ಭಾರತದಲ್ಲಿ ಟ್ವಿಟರ್‌ ಡೌನ್‌ ಆಗಿತ್ತು. ಅನೇಕ ಬಳಕೆದಾರರಿಗೆ ಟ್ವಿಟರ್‌ ವೆಬ್‌ಸೈಟ್‌ಗೆ ಲಾಗಿನ್‌ ಆಗಲು ಸಂಜೆಯವರೆಗೂ ಸಾಧ್ಯವಾಗಿರಲಿಲ್ಲ. ಟ್ವಿಟರ್‌ ಓಪನ್‌ ಮಾಡಿದ ಕೂಡಲೇ, “ಏನೋ ಲೋಪವಾಗಿದೆ. ಮತ್ತೂಮ್ಮೆ ಪ್ರಯತ್ನಿಸಿ’ ಎಂಬ ಸಂದೇಶ ಬರುತ್ತಿತ್ತು. ಈ ಬಗ್ಗೆ ಹಲವರು ಇತರೆ ಸಾಮಾಜಿಕ ಮಾಧ್ಯಮಗಳ ಮೂಲಕ ಅಸಮಾಧಾನ ಹೊರಹಾಕಿದ್ದರು.

ಅರ್ಜಿ ವಜಾ; 25 ಸಾವಿರ ರೂ ದಂಡ!
ನಿಯಮ ಉಲ್ಲಂ ಸಿದ ಕಾರಣಕ್ಕೆ ತಮ್ಮ ಖಾತೆಯನ್ನು ಸಸ್ಪೆಂಡ್‌ ಮಾಡಲಾಗಿದ್ದು, ಈ ಪ್ರಕರಣದಲ್ಲಿ ಟ್ವಿಟರ್‌ ಮಾಲೀಕ ಎಲಾನ್‌ ಮಸ್ಕ್ ಅವರನ್ನು ಕಕ್ಷಿ ಎಂದು ಪರಿಗಣಿಸಬೇಕು ಎಂದು ಕೋರಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾ ಮಾಡಿದೆ. ಜೊತೆಗೆ, ಅರ್ಜಿದಾರರಾದ ಡಿಂಪಲ್‌ ಕೌಲ್‌ಗೆ 25 ಸಾವಿರ ರೂ. ದಂಡವನ್ನೂ ವಿಧಿಸಿದೆ. ಜತೆಗೆ, “ಕೆಲವೊಮ್ಮೆ ನಮಗೂ ಮನರಂಜನೆಯ ಅಗತ್ಯವಿರುತ್ತದೆ’ ಎಂದು ಕೋರ್ಟ್‌ ಹೇಳಿದೆ.

 

Advertisement

Udayavani is now on Telegram. Click here to join our channel and stay updated with the latest news.

Next