ವಾಷಿಂಗ್ಟನ್: ಜಗತ್ತಿನ ಪ್ರಭಾವಿ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟರ್ ಅನ್ನು ಎಲಾನ್ ಮಸ್ಕ್ ಖರೀದಿಸಿದ್ದು, ಇನ್ಮುಂದೆ ಟ್ವಿಟರ್ ಎಲ್ಲರಿಗೂ ಉಚಿತವಾಗಿ ಲಭ್ಯವಾಗುವುದಿಲ್ಲ ಎಂಬ ಸುಳಿವು ನೀಡುವ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಉತ್ತರಾಖಂಡ್: ಹುಟ್ಟೂರಿಗೆ ಭೇಟಿ ನೀಡಿ ತಾಯಿ ಆಶೀರ್ವಾದ ಪಡೆದ ಯೋಗಿ ಆದಿತ್ಯನಾಥ್
ಟ್ವಿಟರ್ ಸಂಸ್ಥೆಯನ್ನು ಖರೀದಿಸಿದ ನಂತರ ಎಲಾನ್ ಮಸ್ಕ್ ಮುಂದಿನ ನಡೆಯ ಬಗ್ಗೆ ಕುತೂಹಲ ಹುಟ್ಟಿಸಿತ್ತು. ಅಲ್ಲದೇ ಸಾಕಷ್ಟು ಹೊಸ ಬದಲಾವಣೆಯಾಗಲಿದೆ ಎಂಬುದಾಗಿ ಈ ಹಿಂದೆ ಮಸ್ಕ್ ತಿಳಿಸಿದ್ದರು.
ಇದೀಗ ಟ್ವಿಟರ್ ಸಾಮಾನ್ಯ ಬಳಕೆದಾರರಿಗೆ ಎಂದಿನಂತೆ ಉಚಿತವಾಗಿ ಲಭ್ಯವಾಗಲಿದೆ ಎಂದು ಮಸ್ಕ್ ಟ್ವೀಟ್ ನಲ್ಲಿ ತಿಳಿಸಿದ್ದು, ಇನ್ಮುಂದೆ ವಾಣಿಜ್ಯ ಮತ್ತು ಸರ್ಕಾರದ ಬಳಕೆದಾರರಿಗೆ ಅಲ್ಪ ಮೊತ್ತದ ಶುಲ್ಕ ವಿಧಿಸುವ ಸಾಧ್ಯತೆ ಇದೆ ಎಂಬ ಸುಳಿವು ನೀಡಿದ್ದಾರೆ.
ಟ್ವಿಟರ್ ಅನ್ನು ಎಲಾನ್ ಮಸ್ಕ್ 44 ಬಿಲಿಯನ್ (3.37 ಲಕ್ಷ ಕೋಟಿ) ಡಾಲರ್ ಮೊತ್ತಕ್ಕೆ ಖರೀದಿಸಿದ್ದು, ಮಾರಾಟದ ಒಪ್ಪಂದ ಹಾಗೂ ಶೇ.100ರಷ್ಟು ಶೇರು ಖರೀದಿಯ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಟ್ವಿಟರ್ ಸಿಇಒ ಪರಾಗ್ ಅಗರ್ವಾಲ್ ಅವರನ್ನು ಹುದ್ದೆಯಿಂದ ಬದಲಾಯಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿತ್ತು.
ಕಳೆದ ತಿಂಗಳು ಎಲಾನ್ ಮಸ್ಕ್ ಟ್ವಿಟರ್ ಖರೀದಿಗೂ ಮುನ್ನ ಟ್ವೀಟರ್ ಬ್ಲೂ ಸಬ್ಸ್ ಕ್ರಿಪ್ಶನ್ ಹಾಗೂ ದರ ಕಡಿತ ಸೇರಿದಂತೆ ಕೆಲವೊಂದು ಬದಲಾವಣೆಗೆ ಸೂಚಿಸಿದ್ದರು. ಟ್ವಿಟರ್ ಬಳಕೆಗೆ ಶುಲ್ಕ ವಿಧಿಸುವ ಹಾಗೂ ಬಳಕೆದಾರರನ್ನು ಹೆಚ್ಚಳ ಮಾಡುವ ಬಗ್ಗೆ ಎಲಾನ್ ಮಸ್ಕ್ ಸಿದ್ಧತೆ ನಡೆಸಿರುವುದಾಗಿ ವರದಿ ವಿವರಿಸಿದೆ.